ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ, ಗೋ ಹತ್ಯೆ ನಿಷೇಧ ಕಾಯ್ದೆ ಮಂಡನೆ ಬಾಕಿ ಇರುವ ಕಾರಣ ವಿಧಾನ ಪರಿಷತ್ ಕಲಾಪವನ್ನು ಮುಂದುವರಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಿಂದ ಪತ್ರ ಬರೆಯಲಾಗಿದೆ. ಡಿ. 15ರಂದು ಬೆಳಗ್ಗೆ 11ಕ್ಕೆ ವಿಧಾನಪರಿಷತ್ ಕಲಾಪ ಕರೆಯಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಡಿ.15ರವರೆಗೆ ನಡೆಯಬೇಕಾಗಿದ್ದ ವಿಧಾನಮಂಡಲ ಕಲಾಪವನ್ನು ಗ್ರಾಮ ಪಂಚಾಯತಿ ಚುನಾವಣೆ ಕಾರಣದಿಂದ ಡಿ.10ಕ್ಕೆ ಮೊಟಕುಗೊಳಿಸಲಾಗಿತ್ತು. ಹೀಗಾಗಿ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿಂತೆ ನೋಟಿಸ್ ನೀಡಿ 14 ದಿನಗಳು ಪೂರ್ಣವಾಗದ ಹಿನ್ನಲೆ ನಿರ್ಣಯ ಮಂಡಿಸಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:ಅಧ್ಯಾದೇಶ ಮಾರ್ಗ?; ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋಹತ್ಯೆ ನಿಷೇಧ ಮಸೂದೆ
ಹೀಗಾಗಿ ಡಿ.15ರಂದು ಕಲಾಪ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಈ ವೇಳೆ ಬಿಜೆಪಿ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಮಸೂದೆ (ಗೋಹತ್ಯೆ ನಿಷೇಧ) ಪರಿಷತ್ ನಲ್ಲಿ ಮಂಡನೆಯಾಗಲು ಬಾಕಿಯಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆಗೆ ಗುರುವಾರ ಪರಿಷತ್ ನಲ್ಲಿ ಹಿನ್ನಡೆಯಾದ ಕಾರಣ ಸೋಮವಾರದ ಕಲಾಪದಲ್ಲಿ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.