Advertisement

Karnataka Govt.,ಆಗಸ್ಟ್‌ನಲ್ಲಿ ತಮಿಳುನಾಡಿಗೆ ಬಿಡಬೇಕಾದ ನೀರು ಜುಲೈಯಲ್ಲೇ ಹರಿದಿದೆ

11:43 PM Jul 30, 2024 | Team Udayavani |

ಬೆಂಗಳೂರು: ಜುಲೈ ತಿಂಗಳಲ್ಲಿ ನಿಗದಿ ಮಾಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ.

Advertisement

ಹೆಚ್ಚುವರಿಯಾಗಿ ಹರಿದಿರುವ ನೀರನ್ನು ಮುಂಬರುವ ತಿಂಗಳಿಗೆ ಬಿಡಬೇಕಾದ ನೀರಿಗೆ ಸರಿದೂಗಿಸಿಕೊಳ್ಳಬೇಕೆಂದು ಎಂದು ದಿಲ್ಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣಾ ಸಮಿತಿ (ಸಿಡಬ್ಲ್ಯೂಆರ್‌ಸಿ) ಸಭೆಯಲ್ಲಿ ಕರ್ನಾಟಕ ಸರಕಾರವು ತಿಳಿಸಿದೆ.

ಜುಲೈ 28ಕ್ಕೆ ಬಿಳಿಗುಂಡ್ಲುವಿನಲ್ಲಿ ಜುಲೈ ಅಂತ್ಯಕ್ಕೆ ನಿಗದಿಪಡಿಸಿದ 40.43 ಟಿಎಂಸಿಗಿಂತ ಹೆಚ್ಚುವರಿಯಾಗಿ 36.34 ಟಿಎಂಸಿ ನೀರು ಹರಿದಿದೆ. ಜುಲೈ 29ರ ಮಾಪನದ 1,08,876 ಕ್ಯೂಸೆಕ್ಸ್‌ ಹರಿವನ್ನು ಪರಿಗಣನೆಗೆ ತೆಗುದುಕೊಂಡರೆ ಒಟ್ಟು 9.40 ಟಿಎಂಸಿ ಆಗುತ್ತದೆ. ಒಟ್ಟಾರೆಯಾಗಿ ತಮಿಳುನಾಡಿನ ಬಿಳಿಗುಂಡ್ಲುವಿನಲ್ಲಿ ಜುಲೈ 29ಕ್ಕೆ 86.17 ಟಿಎಂಸಿ ನೀರು ಸೇರಿದೆ. ಈ ಒಟ್ಟಾರೆ ನೀರಿನ ಮೊತ್ತವು ಆಗಸ್ಟ್‌ ಅಂತ್ಯಕ್ಕೆ ಬಿಡಬೇಕಾದ ನೀರಿನ ಪ್ರಮಾಣದಷ್ಟಾಗಿದೆ ಎಂದು ಮಾಹಿತಿ ನೀಡಿತು.

1995ರ ಕಾವೇರಿ ನ್ಯಾಯಾಧಿಕರಣ ಮತ್ತು ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಮೊದಲನೇ ಸಭೆಯ ನಿರ್ಣಯದಂತೆ ಈ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳಬೇಕೆಂದು ಕೋರಿತು.

ತಮಿಳುನಾಡಿನ ಕೋರಿಕೆ ಏನು?
ಜುಲೈ 28ರಿಂದ ಮೆಟ್ಟೂರು ಜಲಾಶಯದಿಂದ ನೀರಾವರಿಗಾಗಿ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ 23,000 ಕ್ಯುಸೆಕ್‌ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. 2018ರ ಸುಪ್ರೀಂ ಕೋರ್ಟ್‌ನ ಮಾರ್ಪಡಿತ ತೀರ್ಪಿನ ಪ್ರಕಾರ, 2024-25 ಜಲ ವರ್ಷದ ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ನೀರನ್ನು ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿತು.

Advertisement

ಸಮಿತಿಯ ತೀರ್ಮಾನ ಏನು?
ಕರ್ನಾಟಕದ ಮಾಹಿತಿ ಮತ್ತು ತಮಿಳುನಾಡಿನ ಕೋರಿಕೆ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿಯು, ಸದ್ಯಕ್ಕೆ ಬಿಳಿಗುಂಡ್ಲುವಿನ ಹರಿವಿನಲ್ಲಿ ಯಾವುದೇ ಆತಂಕ ಇಲ್ಲ. ಹರಿವು ಸಾಮಾನ್ಯವಾಗಿರುವುದರಿಂದ ಸಮಿತಿಯ ಮುಂದಿನ ತಿಂಗಳ ಸಭೆಯಲ್ಲಿ ಹರಿವಿನ ಪರಿಸ್ಥಿತಿಯನ್ನು ಮತ್ತೂಮ್ಮೆ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next