Advertisement
ಈ ತಿಂಗಳಿನ ಮೊದಲ ವಾರದಲ್ಲೇ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಕೆಂಪಣ್ಣ ಆಯೋಗದ ವರದಿ ಹಾಗೂ ದಾಖಲೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಾಗುತ್ತಿದ್ದಂತೆ ರಾಜ್ಯದಲ್ಲಿ ಡಿನೋಟಿಫಿಕೇಶನ್ ಹಗರಣಗಳ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಕಾಲದ ಡಿನೋಟಿಫಿಕೇಶನ್ ಪ್ರಕರಣಗಳನ್ನು ಸರಕಾರ ಝಳಪಿಸುವುದಕ್ಕೆ ಮುಂದಾಗಿದೆ. ಹೀಗಾಗಿ ಮುಡಾ ಜತೆಯಲ್ಲಿ ಅರ್ಕಾವತಿ ವಿವಾದವೂ ಜಟಾಪಟಿಗೆ ಕಾರಣ ವಾಗುವ ಸಾಧ್ಯತೆ ಇದೆ.
ರಾಜ್ಯಪಾಲರು ಬರೆದಿರುವ ಪತ್ರ ಆಧರಿಸಿ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಬೆಂಗಳೂರು ಅಭಿವೃದ್ಧಿ ಸಚಿವರ ಪ್ರಧಾನ ಕಾರ್ಯದರ್ಶಿ ಹಾಗೂ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಹಾಗೂ ದಾಖಲೆ ಕೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಐದು ಪರಿಚ್ಛೇದ ಹಾಗೂ ದಾಖಲೆಗಳ ಅನುಬಂಧವನ್ನು ಒಳಗೊಂಡ ಸಂಪುಟವನ್ನು ಕಳುಹಿಸಿ ಕೊಡ ಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆಗೆ ರವಾನೆ ಮಾಡಿದ ಅನಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ. ಸೆ. 20ರಂದು ಈ ಪತ್ರ ವ್ಯವಹಾರ ನಡೆದಿದೆ ಎಂದು ಸರಕಾರದ ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.
Related Articles
ಈ ಮಧ್ಯೆ ಮುಡಾ ವಿವಾದ ರಾಜಭವನ ಹಾಗೂ ಸರಕಾರದ ಮಧ್ಯೆ ಜಂಗೀ ಕುಸ್ತಿ ಸೃಷ್ಟಿಸಿತ್ತು. ರಾಜ್ಯಪಾಲರಿಗೆ ಸರಕಾರ ಆಗಾಗ ನೀಡುವ ಸಲಹೆಗಳು ಕಿರಿಕಿರಿ ಸೃಷ್ಟಿಸುತ್ತಿದ್ದಂತೆ ಮಾಹಿತಿ ಕೋರಿ ರಾಜ್ಯಪಾಲರು ಸರಕಾರಕ್ಕೆ ಇಕ್ಕಟ್ಟು ಸೃಷ್ಟಿಸಲಾರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ ಬಳಿಕ ಎರಡು ಸಾಂವಿಧಾನಿಕ ಸಂಸ್ಥೆಗಳ ಮಧ್ಯೆ ತಿಕ್ಕಾಟ ಆರಂಭವಾಗಿದ್ದು, ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಗೂ ಯಡಿಯೂರಪ್ಪ ಸರಕಾರದ ಕಾಲಾವಧಿಯ ವಾತಾವರಣ ಪುನರ್‌ನಿರ್ಮಾಣಗೊಂಡಿದೆ.
Advertisement
ವರದಿಯಲ್ಲಿ ಏನಿದೆ?ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆ 2014 ರಲ್ಲೇ ನ್ಯಾ| ಕೆಂಪಣ್ಣ ಅವರು ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರಾಗಲಿ, ಆ ಬಳಿಕ ಅಧಿಕಾರಕ್ಕೆ ಬಂದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಾಗಲಿ ಕ್ರಮ ತೆಗೆದುಕೊಂಡಿರಲಿಲ್ಲ. ವರದಿಯನ್ನು ಸರಕಾರ ಸ್ವೀಕರಿಸಿ ದೆಯೇ, ಇಲ್ಲವೇ ಎಂಬ ಸ್ಪಷ್ಟತೆಯನ್ನೂ ನೀಡದೆ ಕತ್ತಲೆಯಲ್ಲಿ ಇಡಲಾಗಿತ್ತು. ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಬಂದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರೂ ಅದು ಅಲ್ಲಿಯೇ ತಟಸ್ಥವಾಗಿತ್ತು. ಕಾಂಗ್ರೆಸ್ ಸರಕಾರ ಬಂದ ಅನಂತರ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಯೋಗಗಳ ತನಿಖಾ ವರದಿಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅವುಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದರು.