Advertisement

ಖಾಸಗಿ ಸಂಸ್ಥೆಗಳಿಗೆ ಗೋಮಾಳ? ಹೊಸ ನೀತಿ ರೂಪಿಸಲು ಮುಂದಾದ ರಾಜ್ಯ ಸರಕಾರ

11:36 PM Jan 29, 2022 | Team Udayavani |

ಬೆಂಗಳೂರು: ಗೋಮಾಳ ಸಹಿತ ವಿವಿಧ ಬಗೆಯ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಲು ನೀತಿಯೊಂದನ್ನು ತರಲು ರಾಜ್ಯ ಸರಕಾರ ಮುಂದಾಗಿದ್ದು, ಅದಕ್ಕಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ.

Advertisement

ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಸರಕಾರಿ ಜಮೀನುಗಳನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡುವ ನೀತಿ ರೂಪಿಸಬೇಕಾಗಿದೆ. ಇದಕ್ಕಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ.

ಸಮಿತಿಯಲ್ಲಿ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಪ್ರಭು ಚೌಹಾಣ್‌, ಬಿ.ಸಿ. ಪಾಟೀಲ್‌, ಭೈರತಿ ಬಸವರಾಜ ಸದಸ್ಯರಾಗಿದ್ದಾರೆ. ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ ಸರಕಾರದ ಜಂಟಿ ಕಾರ್ಯದರ್ಶಿ ಜ. 29ರಂದು ಆದೇಶ ಹೊರಡಿಸಿದ್ದಾರೆ.

ಖಾಸಗಿ ಸಂಘ-ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿರುವ ಜಮೀನುಗಳನ್ನು ಗುತ್ತಿಗೆ ಪಡೆದ ಸಂಘ-ಸಂಸ್ಥೆಗಳಿಗೆ ಖಾಯಂ ಆಗಿ ಮಂಜೂರು ಮಾಡುವ ಬಗ್ಗೆ ಸರಕಾರ 2020ರಲ್ಲಿ ಆದೇಶ ಹೊರಡಿಸಿತ್ತು.

ಈ ಮಧ್ಯೆ ಬಗರ್‌ಹುಕುಂ ರೀತಿಯಲ್ಲಿ ಸರಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ವ್ಯಕ್ತಿಗಳಿಗೆ ಆ ಜಮೀನು ಮಂಜೂರು ಮಾಡುವ ವಿಷಯ ಬಾಕಿ ಉಳಿದಿದೆ. ಅಲ್ಲದೆ ಹೆಚ್ಚುವರಿ ಗೋಮಾಳ ಇದ್ದ ಕಡೆ ಅಂತಹ ಜಮೀನನ್ನು ಸಾಗುವಳಿ ಮಾಡುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡ ಬಹುದು ಎಂದು ಹೈಕೋರ್ಟ್‌ ಹೇಳಿತ್ತು. ಖಾಸಗಿ ಸಂಘ-ಸಂಸ್ಥೆಗಳಿಗೆ ಗೋಮಾಳ ಮತ್ತಿತರ ಸರಕಾರಿ ಜಮೀನು ಮಂಜೂರು ಮಾಡಲು ನೀತಿ ರೂಪಿಸಲು ಸರಕಾರ ಮುಂದಾಗಿ ರುವುದರಿಂದ ಖಾಸಗಿ ವ್ಯಕ್ತಿಗಳಿಗೆ ಸರಕಾರಿ ಜಮೀನು ಮಂಜೂರು ಮಾಡುವ ಬೇಡಿಕೆ ಮತ್ತೆ ಜೀವ ಪಡೆದುಕೊಳ್ಳಬಹುದು.

Advertisement

ಇದನ್ನೂ ಓದಿ:ಫೆಬ್ರವರಿ ಅಂತ್ಯದೊಳಗೆ ಗ್ರಾಮ ಒನ್‌ ರಾಜ್ಯಾದ್ಯಂತ ವಿಸ್ತರಣೆ: ಸಿಎಂ

ಸಂಪುಟ ಉಪಸಮಿತಿ ರಚನೆ
ಇದೇ ಜ. 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಸಚಿವ ಸಂಪುಟದ ಉಪಸಮಿತಿ ರಚಿಸುವ ತೀರ್ಮಾನಕ್ಕೆ ಬರಲಾಗಿತ್ತು. ಅದರಂತೆ ಈಗ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ. ಜ. 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳಿಗೆ ಸರಕಾರದ ಜಮೀನು ಮಂಜೂರು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಅಂತಹ ಮಂಜೂರಾತಿಗಳಿಗೆ ನೀತಿ ರೂಪಿಸಲು ಸರಕಾರ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next