Advertisement

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ

06:00 AM May 17, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಹಿನ್ನೆಲೆಯಲ್ಲಿ ಯಾರಿಗೆ ಸರ್ಕಾರ ರಚನೆಗೆ ಅವಕಾಶ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು ಸರ್ಕಾರ ರಚನೆಗೆ ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ರಾಜ್ಯಪಾಲ ವಜೂಭಾಯ್‌ ವಾಲಾ ಆಹ್ವಾನ ನೀಡಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಹದಿನೈದು ದಿನ ಕಾಲಾವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಗುರುವಾರ ಬೆಳಗ್ಗೆ 9.00 ಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಮತ್ತು ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

ಸದ್ಯಕ್ಕೆ ಬಿ.ಎಸ್‌.ಯಡಿಯೂರಪ್ಪ ಅವರು ಒಬ್ಬರೇ ಪ್ರಮಾಣ ಸ್ವೀಕರಿಸಲಿದ್ದು ಬಹುಮತ ಸಾಬೀತಿನ ನಂತರ ಸಂಪುಟ ರಚನೆ ನಡೆಯಲಿದೆ. ಬಹುಮತ ಸಾಬೀತುಪಡಿಸುವ ವಿಶ್ವಾಸವನ್ನೂ ಬಿಜೆಪಿ ವ್ಯಕ್ತಪಡಿಸಿದ್ದು, ಯಾವ ರೀತಿ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಆಪರೇಷನ್‌ ಕಮಲದ ಲಕ್ಷಣಗಳು ಕಂಡು ಬರುತ್ತಿವೆ. ಬುಧವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್‌, ರಾಜ್ಯ  ಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿರುವುದನ್ನು ದೃಢಪಡಿಸಿದರು. ಬಿ.ಎಸ್‌.ಯಡಿ ಯೂರಪ್ಪ ಅವರು ಗುರುವಾರ ಮುಖ್ಯಮಂತ್ರಿಯಾಗಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದು, ಸದನದಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮೈತ್ರಿಯನ್ನು ಅವಕಾಶವಾದಿತನ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಎರಡೂ ಪಕ್ಷಗಳು ಹಿಂದೆಯೆಲ್ಲಾ ಹೇಗೆ ನಡೆದುಕೊಂಡಿವೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಆದರೆ, ಪ್ರಜಾಪ್ರಭುತ್ವ ಮೌಲ್ಯ ಎತ್ತಿಹಿಡಿಯಲು ರಾಜ್ಯ  ಪಾಲರು ಅತಿ ದೊಡ್ಡ ಪಕ್ಷವಾದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಹಾಗೂ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. 

ವಿರೋಧ: ಈ ಮಧ್ಯೆ, ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಕೊಟ್ಟಿರುವುದಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ದ್ದು ಇದರ ವಿರುದಟಛಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದರ ನಡುವೆಯೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದು, ಕಾಂಗ್ರೆಸ್‌ ಶಾಸಕರು ಬಿಡದಿ ರೆಸಾರ್ಟ್‌ಗೆ
“ಶಿಫ್ಟ್’ ಆಗಿದ್ದಾರೆ. ಬಳಿಕ ಜೆಡಿಎಸ್‌ ಶಾಸಕರೂ ರೆಸಾರ್ಟ್‌ಗೆ ತೆರಳಿದರು. ಬಿಜೆಪಿ ಶಾಸಕರಿಗೆ ಬೆಂಗಳೂರಿನಲ್ಲೇ ಇರುವಂತೆ ಸೂಚನೆ ನೀಡ ಲಾಗಿದೆ.
ಮೂರೂ ಪಕ್ಷಗಳಲ್ಲಿ ಆಪರೇಷನ್‌ ಭೀತಿ ಉಂಟಾಗಿದ್ದು, ಎಂಟು ಕಾಂಗ್ರೆಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಹೇಳಿದರೆ, ಬಿಜೆಪಿಯ
ಆರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಹೇಳಿದೆ.

ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿದರೆ ಹುಷಾರ್‌ ಎಂದು ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದು, ನಾವೇನೂ ಸನ್ಯಾಸಿಗಳ್ಳಲ್ಲ. ನಮಗೂ ಆಪರೇಷನ್‌ ಮಾಡಲು ಬರುತ್ತದೆ. ನಮ್ಮ ಶಾಸಕರಿಗೆ ಕೈ ಹಾಕಿದರೆ ನಾವೂ ನಿಮ್ಮ ಶಾಸಕರಿಗೆ ಕೈ ಹಾಕ್ತೇವೆ ಎಂದು ಹೇಳಿದ್ದಾರೆ. ನಮ್ಮ ಶಾಸಕರಿಗೆ ಬಿಜೆಪಿ 100 ಕೋಟಿ ರೂ. ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಬಿಜೆಪಿ ನಿರಾಕರಿಸಿದೆ.

Advertisement

ಚಟುವಟಿಕೆ: ಇದಕ್ಕೂ ಮುನ್ನ ಬುಧವಾರ ಇಡೀ ದಿನ ರಾಜಭವನ ರಾಜಕೀಯ ಚಟುವಟಿಕೆಗಳ ತಾಣ ವಾಗಿತ್ತು.  ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಿಯೋಗ ಹಾಗೂ ಬಿಜೆಪಿ ನಾಯಕರ ನಿಯೋಗ ಬುಧವಾರ ರಾಜ್ಯಪಾಲರ ವಜೂಭಾಯ್‌ ವಾಲಾ ಅವರನ್ನು ಭೇಟಿ ಮಾಡಿ ಶಾಸಕರ ಬೆಂಬಲದ ಪಟ್ಟಿ ನೀಡಿದರು. ಯಡಿಯೂರಪ್ಪ, ಅನಂತಕುಮಾರ್‌, ಸದಾನಂದಗೌಡ, ಪ್ರಕಾಶ್‌ ಜಾಬ್ಡೇಕರ್‌, ನೇತೃತ್ವದ ಬಿಜೆಪಿಯು, ಸುಪ್ರೀಂ
ಕೋರ್ಟ್‌ ತೀರ್ಪು ಹಾಗೂ ಮಾಜಿ ರಾಷ್ಟ್ರಪತಿ ಆರ್‌. ವೆಂಕಟರಾಮನ್‌ ಸೂತ್ರದ ಪ್ರಕಾರ ಅತಿ ಹೆಚ್ಚು ಸೀಟು ಪಡೆದಿರುವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನ ನೀಡಬೇಕು. ಸದನದಲ್ಲಿ ಬಹುಮತ ಸಾಬೀತಾಗಬೇಕು ಎಂದು ರಾಜ್ಯಪಾಲರ ಮುಂದೆ ಪ್ರಸ್ತಾವ ಮಂಡಿಸಿದರು.

ಪರಮೇಶ್ವರ್‌, ಎಚಿಕೆ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಗೋವಾ, ಮಣಿಪುರ, ನಾಗಾಲ್ಯಾಂಡ್‌ ರಾಜ್ಯಗಳಲ್ಲಿನ ಉದಾಹ ರಣೆ ನೀಡಿ, ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಹೊಂದಿರುವ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂಬ ವಾದ ಮಂಡಿಸಿದರು. ಈ ಕುರಿತು ಕಾನೂನು ತಜ್ಞರು ಹಾಗೂ ಹಿಂದಿನ ನ್ಯಾಯಾಲಯದ ಆದೇಶ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರ ವಜೂ 
ಭಾಯ್‌ ವಾಲಾ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ನಿಯೋಗಕಕ್ಕೆ ಭರವಸೆ ನೀಡಿದರು. ಸಂಜೆ ವೇಳೆಗೆ ರಾಜ್ಯದ 222 ಕ್ಷೇತ್ರಗಳಲ್ಲಿ ಆಯ್ಕೆ ಯಾಗಿರುವನೂತನ ಶಾಸಕರ ಮಾಹಿತಿ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದ್ದು ರಾಜಭವನಕ್ಕೂ ತಲುಪಿಸಿದರು. ನಂತರ ರಾಜ್ಯಪಾಲ ವಾಲಾ ಅವರು ಕೇಂದ್ರ ಅಟಾರ್ನಿ ಜನರಲ್‌ ಅವರ ಸಲಹೆ ಕೇಳಿ ರಾತ್ರಿ 9.45ರ ವೇಳೆಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌.ಯಡಿಯುರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರು . 

ಇದಕ್ಕೂ ಮುನ್ನ ಬುಧವಾರ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದು ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆದು ಎಚ್‌. ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ
ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತು. ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಡೆಯಿತಾದರೂ ಜೆಡಿಎಸ್‌ ಗೆ ಸರ್ಕಾರ ರಚನೆಗೆ ಬೆಂಬಲ ನೀಡುವ ಕುರಿತು ಶಾಸಕರ ಸಹಿ ಪಡೆಯಲಾಯಿತು. ಆದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿದ್ದರಿಂದ ಎರಡೂ ಪಕ್ಷದ ನಾಯಕರಿಗೆ ಕೆಲಕಾಲ ತಲೆಬಿಸಿಯಾಗಿತ್ತು. ಆದರೆ, ಸಂಜೆ ವೇಳೆಗೆ ಎಲ್ಲ ಶಾಸಕರನ್ನೂ ಒಟ್ಟುಗೂಡಿಸುವಲ್ಲಿ ನಾಯಕರು ಯಶಸ್ವಿಯಾದರು. ಕಾಂಗ್ರೆಸ್‌ ಶಾಸಕರನ್ನು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಾಯಿತು. ಜೆಡಿಎಸ್‌ ಶಾಸಕರು ಸಹ ರೆಸಾರ್ಟ್‌ನತ್ತ ತೆರಳಿದರು.

ರಾಜ್ಯಪಾಲರ ತೀರ್ಮಾನಕ್ಕೆ ಕಾರಣವೇನು? 
ಸಂಖ್ಯಾ ಬಲದ ಕೊರತೆ ಇದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸರ್ಕಾರ ರಚನೆಗೆ ಮೊದಲು ಹಕ್ಕು ಮಂಡಿಸಿದ್ದೇ ರಾಜ್ಯಪಾಲರು ಬಿ.ಎಸ್‌. ಯಡಿಯೂರಪ್ಪ ಅವರನ್ನು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಲು ಪ್ರಮುಖ ಕಾರಣ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಜಂಟಿಯಾಗಿ ಸರ್ಕಾರ ರಚಿಸುವ ಬಗ್ಗೆ ಮತ್ತು ನಮಗೆ 116 ಸದಸ್ಯಬಲವಿದೆ ಎಂದು ಶಾಸಕಾಂಗ ಪಕ್ಷದ ನಿರ್ಣಯದ ಬಗ್ಗೆ ರಾಜ್ಯಪಾಲರಿಗೆ ಪತ್ರ ನೀಡಿದ್ದರೂ ಅದಕ್ಕೆ ಮುನ್ನವೇ ಬಿಜೆಪಿ ಶಾಸಕಾಂಗ ಪಕ್ಷದ ನಿರ್ಣಯದೊಂದಿಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ಒಂದೊಮ್ಮೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಟ್ಟಾಗಿ ಬಿಜೆಪಿಗೆ ಮುನ್ನವೇ ಶಾಸಕಾಂಗ ಪಕ್ಷದ ನಿರ್ಣಯದೊಂದಿಗೆ ಸಂಖ್ಯಾಬಲ ಸಮೇತ ರಾಜ್ಯಪಾಲರಿಗೆ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಿದ್ದರೆ ಆಗ ರಾಜ್ಯಪಾಲರು ಅದನ್ನು ಪರಿಗಣಿಸಬೇಕಿತ್ತು. ಮೇಲಾಗಿ ಸಂಖ್ಯಾಬಲದ ವಿಚಾರ ವಿಧಾನಸಭೆಯಲ್ಲಿ ನಿರ್ಧಾರವಾಗಬೇಕೇ ಹೊರತು ರಾಜ್ಯಪಾಲರ
ಮುಂದೆ ಅಲ್ಲ. ಹೀಗಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರ ಪೆರೇಡ್‌ ನಡೆಸಲು ಮುಂದಾಗಿದ್ದರೂ ರಾಜ್ಯ ಪಾಲರು ಅದನ್ನು ಒಪ್ಪಿಕೊಳ್ಳಲಿಲ್ಲ. ಬದಲಾಗಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಮೊದಲು ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದ್ದರಿಂದ ರಾಜ್ಯ  ಪಾಲರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಕೊಟ್ಟಿದ್ದಾರೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ನಾಯಕನ ಆಯ್ಕೆ ಆಗಿಲ್ಲ ರ್ಕಾರ ರಚನೆಯಲ್ಲಿ ಪಾತ್ರ ವಹಿಸಲು ಮುಂದಾಗಿರುವ ಕಾಂಗ್ರೆಸ್‌ ಇದುವರೆಗೂ ತನ್ನ ಶಾಸಕಾಂಗ ಪಕ್ಷದ ನಾಯಕ ನ ಆಯ್ಕೆ ಮಾಡಿಲ್ಲ. ಸದ್ಯ ರೇಸ್‌ನಲ್ಲಿ ಹಿರಿಯ ನಾಯಕರಾದ ದೇಶಪಾಂಡೆ, ಎಚ್‌.ಕೆ. ಪಾಟೀಲ್‌, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಇದ್ದಾರೆ. ಡಿಸಿಎಂ ಸ್ಥಾನಕ್ಕೆ ಪರಮೇಶ್ವರ್‌ ಹೆಸರು ಚಾಲ್ತಿಯಲ್ಲಿ ಇದೆಯಾದರೂ, ಪಕ್ಷದಲ್ಲೇ ಕೆಲವು ಹಿರಿಯ ನಾಯಕರ ಆಕ್ಷೇಪವಿದೆ ಎಂದು ಹೇಳಲಾಗಿದೆ.

ಯಾರ ಕೈಗೂ ಸಿಗದ ಕೈ ಶಾಸಕ ಆನಂದ್‌ ಸಿಂಗ್‌
ಬಳ್ಳಾರಿಯ ವಿಜಯನಗರ (ಹೊಸಪೇಟೆ) ಶಾಸಕ ಆನಂದ್‌ ಸಿಂಗ್‌ ಕಾಂಗ್ರೆಸ್‌ ನಾಯಕರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ಫೋನ್‌ ಸ್ವಿಚ್‌ ಆಫ್ ಮಾಡಿಕೊಂಡಿರುವ ಆನಂದ್‌ ಸಿಂಗ್‌ರನ್ನು ಸಂಪರ್ಕಿಸಲು ಕಾಂಗ್ರೆಸ್‌ನ ಎಲ್ಲ ನಾಯಕರು ಕಸರತ್ತು ನಡೆಸಿದರು. ಆನಂದ ಸಿಂಗ್‌ರನ್ನು ಕರೆತರಲು ಜಮೀರ್‌ ಅಹಮದ್‌ ಮತ್ತುನಾಗೇಂದ್ರ ಏರ್‌ಪೋರ್ಟ್‌ಗೆ ತೆರಳಿ ಕಾದು ಕಾದು ವಾಪಸ್‌ ಆಗಮಿಸಿದರು. ಒಂದು ಮೂಲದ ಪ್ರಕಾರ ಆನಂದ್‌ ಸಿಂಗ್‌ ಗುಜರಾತ್‌ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪನವರು ಹೇಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ನಮ್ಮಲ್ಲಿ 117 ಶಾಸಕರಿದ್ದಾರೆ. ಅವರ ಬಳಿ 103 ಶಾಸಕರಿದ್ದಾರೆ. ಒಂದು ವೇಳೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದರೆ ತಪ್ಪಾಗುತ್ತದೆ. ಅದರ ವಿರುದ್ದ ಕಾನೂನಿದೆ. ಅದನ್ನು ಮುಂದೆ ನೋಡಿ ಹೋರಾಟ ಮಾಡುತ್ತೇವೆ.
● ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next