Advertisement

ನಾಳೆಯಿಂದ ವಿಧಾನ ಮಂಡಲ ಅಧಿವೇಶನ: ತಂತ್ರಕ್ಕೆ ಪ್ರತಿತಂತ್ರ

09:51 AM Feb 17, 2020 | mahesh |

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರ ಆರಂಭವಾಗಲಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆ ವೈಫ‌ಲ್ಯ, ಹಣಕಾಸು ಆಯೋಗದಿಂದ ರಾಜ್ಯಕ್ಕೆ 5,490 ಕೋ.ರೂ. ಅನುದಾನ ಕಡಿತ, ಗಣಿ ಅಕ್ರಮ ಆರೋಪ ಹೊತ್ತ ಆನಂದ್‌ ಸಿಂಗ್‌ಗೆ ಅರಣ್ಯ ಖಾತೆ ನೀಡಿರುವುದರ ಸಹಿತ ಹಲವು ವಿಚಾರಗಳನ್ನು ಪ್ರಸ್ತಾವಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಣತಂತ್ರ ರೂಪಿಸಿವೆ. ಸೂಕ್ತ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.

Advertisement

ಬೀದರ್‌ನ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೇಶದ್ರೋಹ ಆರೋಪ ಪ್ರಕರಣ ದಾಖಲು, ಗಾಂಧೀಜಿ ಕುರಿತು ಅನಂತಕುಮಾರ್‌ ಹೆಗಡೆ ಹೇಳಿಕೆ, ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದ ಸಂದರ್ಭದ ಘಟನೆಗಳು ಕೂಡ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ.

ಅಧಿವೇಶನ ನಾಲ್ಕು ದಿನ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅನಂತರದ ಮೂರು ದಿನಗಳಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಆದರೆ ಸರಕಾರದ ವೈಫ‌ಲ್ಯಗಳನ್ನು ಪ್ರಸ್ತಾವಿಸಿ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡಲು ವಿಪಕ್ಷಗಳು ಮುಂದಾಗಿವೆ.

ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸಿದ್ದರೂ 5,490 ಕೋ.ರೂ. ಅನುದಾನ ಕಡಿತ, ಕೇಂದ್ರದಿಂದ ರಾಜ್ಯಕ್ಕೆ ಪಾವತಿ ಬಾಕಿ ಪ್ರಸ್ತಾವಿಸುವ ಮೂಲಕ ಕಾಂಗ್ರೆಸ್‌ ನಾಯಕರು ಈಗಾಗಲೇ ವಾಗ್ಧಾಳಿ ನಡೆಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಧ್ವನಿಸುವುದಾಗಿಯೂ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಆಂತರಿಕ ಗುದ್ದಾಟ, ಆನಂದ್‌ ಸಿಂಗ್‌ಗೆ ಅರಣ್ಯ ಖಾತೆ ನೀಡಿಕೆ, ಶಿಕ್ಷಕಿ ವಿರುದ್ಧ ದೇಶದ್ರೋಹ ಆರೋಪ ಪ್ರಕರಣ ದಾಖಲಿಸಿರುವುದನ್ನು ಪ್ರಮುಖ ಅಸ್ತ್ರವಾಗಿ ಎತ್ತಿಕೊಂಡು ವಾಗ್ಧಾಳಿಗೆ ಕಾಂಗ್ರೆಸ್‌ ತೀರ್ಮಾನಿಸಿದೆ. ಅಧಿಕಾರಿಗಳ ವರ್ಗಾವಣೆ, ಶಾಸಕರ ಅನುದಾನ ಕಡಿತ, ಸಮ್ಮಿಶ್ರ ಸರಕಾರದ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಸೇರಿ ಹಲವು ವಿಚಾರಗಳಲ್ಲಿ ಸರಕಾರದ ವಿರುದ್ಧ ಮುಗಿ ಬೀಳಲು ಜೆಡಿಎಸ್‌ ನಿರ್ಧರಿಸಿದೆ.

Advertisement

ತಿರುಗೇಟಿಗೆ ಬಿಜೆಪಿ ಸಿದ್ಧತೆ
ವಿಪಕ್ಷಗಳ ಟೀಕೆಗಳಿಗೆ ಪ್ರತ್ಯುತ್ತರ ನೀಡಲು ಬಿಜೆಪಿ ಸಿದ್ಧತೆ ಮಾಡಿದೆ. ಈಗಾಗಲೇ ಸಿಎಂ ಬಿಎಸ್‌ವೈ ಇಲಾಖಾ ವಾರು ಬಜೆಟ್‌ ಪೂರ್ವಭಾವಿ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ. ಆರ್ಥಿಕ ಸ್ಥಿತಿಯ ಬಗ್ಗೆ ಅಂಕಿಅಂಶ ಸಂಗ್ರಹಿಸಿ ದ್ದಾರೆ. ವಿಪಕ್ಷ ಆರೋಪಗಳಿಗೆ ಸೂಕ್ತ ತಿರುಗೇಟು ನೀಡಲು ಸಿದ್ಧರಾಗುವಂತೆ ಸಂಬಂಧಪಟ್ಟ ಇಲಾಖೆಗಳ ಸಚಿವ ರಿಗೂ ಸೂಚನೆ ನೀಡಿದ್ದಾರೆ. ಲೋಕೋ ಪಯೋಗಿ, ಕಂದಾಯ ಇಲಾಖೆ ಗಳಿಂದ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಪಟ್ಟಿ ಸಿದ್ಧಪಡಿಸಲು ನಿರ್ದೇಶಿಸಿದ್ದಾರೆ.

ಸಿದ್ದು ನೇತೃತ್ವ
ವಿಧಾನಮಂಡಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದರೂ ವಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ವಿಚಾರದ ಗೊಂದಲಕ್ಕೆ ಕಾಂಗ್ರೆಸ್‌ ಮುಕ್ತಿ ಹಾಡಿಲ್ಲ. ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರೂ ಅವು ಅಂಗೀಕಾರವಾಗಿಲ್ಲ, ಹೊಸಬರ ನೇಮಕವೂ ಆಗಿಲ್ಲ. ಹೀಗಾಗಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರೇ ವಿಪಕ್ಷ , ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರಲಿದ್ದಾರೆ. ಅಧಿ ವೇಶನಕ್ಕೆ ಮುನ್ನ ಬದಲಾವಣೆ ಆಗಲಿದೆ ಎಂಬ ಮಾತು ಕೇಳಿಬಂದಿತ್ತಾದರೂ ಇದು ವರೆಗೆ ಹೈಕಮಾಂಡ್‌ನಿಂದ ಸೂಚನೆ ಸಿಕ್ಕಿಲ್ಲ. ಹೀಗಾಗಿ ಯಥಾಸ್ಥಿತಿ ಮುಂದು ವರಿಯಬಹುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ವಿಪಕ್ಷ ಅಸ್ತ್ರಗಳು
– ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆ ವೈಫ‌ಲ್ಯ
-ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನುದಾನ ಕಡಿತ
– ಗಣಿ ಆರೋಪ ಹೊತ್ತ ಆನಂದ್‌ ಸಿಂಗ್‌ಗೆ ಅರಣ್ಯ ಜವಾಬ್ದಾರಿ
– ಮಂಗಳೂರು ಗಲಭೆ, ಗೋಲಿಬಾರ್‌
– ಬೀದರ್‌ನ ಶಾಹೀನ್‌ ಶಾಲೆಯ ವಿವಾದ
– ಗಾಂಧೀಜಿ ಕುರಿತು ಅನಂತಕುಮಾರ್‌ ಹೇಳಿಕೆ

4 ದಿನಅಧಿವೇಶನ
– ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ
– ಮಂಗಳವಾರದಿಂದ ಮೂರು ದಿನ ಭಾಷಣದ ಮೇಲೆ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next