ಬೆಂಗಳೂರು: ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಮಾಸಿಕ 500 ರೂ. ಸಹಾಯಧನವನ್ನು ಒಂದು ಸಾವಿರ ರೂ.ಗೆ ಏರಿಸಲಾಗುವುದು ಹಾಗೂ ವಿದ್ಯಾರ್ಥಿಗಳ ಮಕ್ಕಳ ಬಸ್ಸು ಯೋಜನೆಯಡಿ 1 ಸಾವಿರ ಬಸ್ಸುಗಳ ಕಾರ್ಯಾಚರಣೆ 2 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಜತೆಗೆ ರಾಜ್ಯ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಸರಕಾರ ಬದ್ಧವಿದೆ. ಅದಕ್ಕೆ ಬಜೆಟ್‌ನಲ್ಲಿ ಆರ್ಥಿಕ ಲಭ್ಯತೆಯ ಅವಕಾಶವನ್ನು ಕಲ್ಪಿಸಿಕೊಳ್ಳಲಾಗಿದೆ ಎಂದರು.
7ನೇ ವೇತನ ಆಯೋಗದ ಶಿಫಾರಸು ಜಾರಿಗಾಗಿಯೇ ನಾವು ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ| ಸುಧಾಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಮಾರ್ಚ್ ಒಳಗೆ ಮಧ್ಯಾಂತರ ವರದಿ ನೀಡುವಂತೆ ಸಮಿತಿಗೆ ಸೂಚಿಸಿ ಅದರ ಆಧಾರದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಕಾಂಗ್ರೆಸ್‌ನ ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರಕ್ಕೆ ಅನುಕೂಲವಾಗುವ 295.26 ಕೋಟಿ ರೂ. ಮೊತ್ತದ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಯವರು, ಹಿರಿಯ ನಾಯಕರಾಗಿದ್ದ ಧರ್ಮ ಸಿಂಗ್ ಅವರ ಗೌರವಾರ್ಥ ಒಪ್ಪಿಗೆ ನೀಡಲಾಗುವುದು. ಅಲ್ಲದೆ, ಕೃಷ್ಣಾ ಮೇಲ್ದಂಡೆ ಯೋಜನೆ ಸ್ಕೀಂ-3ರ 9 ಯೋಜನೆ ಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಲೇಖಾನುದಾನಕ್ಕೆ ಅನುಮೋದನೆ
ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರ ಉತ್ತರದ ಬಳಿಕ 1.07 ಲಕ್ಷ ಕೋಟಿ ರೂ. ಲೇಖಾನುದಾನದ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ) ವಿಧೇಯಕ-2023ಕ್ಕೆ ಅನುಮೋದನೆ ಪಡೆಯಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಧನ ವಿನಿಯೋಗ ವಿಧೇಯಕ-2023ಕ್ಕೂ ಅನುಮೋದನೆ ಪಡೆಯಲಾಯಿತು.