ಸುಬ್ರಹ್ಮಣ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ದ. ಕ. ಜಿಲ್ಲಾಡಳಿತ ಹಾಗೂ ಶ್ರೀ ದೇಗುಲದ ವತಿಯಿಂದ ಗೋಪುರದ ಮುಂಭಾಗ ಸ್ವಾಗತಿಸಿದ ಅವರನ್ನು ಶ್ರೀ ದೇಗುಲದ ಒಳಗೆ ಕರೆದೊಯ್ಯಲಾಯಿತು.
ಶೇಷ ಸೇವೆ ಸಮರ್ಪಣೆ
ರಾಜ್ಯಪಾಲರು ಶ್ರೀ ಸುಬ್ರಹ್ಮಣ್ಯ ದೇವರಿಗೆ ಶೇಷ ಸೇವೆಯನ್ನು ಅರ್ಪಿಸಿದರು. ಬಳಿಕ ಅವರಿಗೆ ಪ್ರಧಾನ ಅರ್ಚಕ ವೆ| ಮೂ| ಸೀತಾರಾಮ ಎಡಪಡಿತ್ತಾಯರು ಶಾಲು ಹೊದೆಸಿ ಮಹಾಪ್ರಸಾದ ನೀಡಿದರು.
ಹೊಸಳಿಗಮ್ಮನ ದರುಶನ ಮಾಡಿದ ರಾಜ್ಯಪಾಲರು ಅರ್ಚನೆ ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು. ಅನಂತರ ತುಳುನಾಡಿನ ಪ್ರಮುಖ ಖಾದ್ಯ ಸೆಟ್ ದೋಸೆ ಮತ್ತು ಬನ್ಸ್ ಸವಿದರು. ರಾಜ್ಯಪಾಲರೊಂದಿಗೆ ಪತ್ನಿ ಅನಿತಾ ಗೆಹ್ಲೋಟ್, ಮೊಮ್ಮಕ್ಕಳಾದ ಧೀರಜ್ ಗೆಹ್ಲೋಟ್, ರಜನಿ ಗೆಹ್ಲೋಟ್ ಜತೆಗಿದ್ದರು.
ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್‌ಎಂ.ಆರ್., ಜಿ.ಪಂ. ಸಿಇಒ ಡಾ| ಕುಮಾರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಶಿಷ್ಟಾಚಾರ ವಿಭಾಗದ ಗೋಪಿನಾಥ ನಂಬೀಶ, ಜಯರಾಮ್, ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡುಕಜೆ, ವನಜಾ ವಿ. ಭಟ್, ಶೋಭಾ ಗಿರಿಧರ್ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ರಾಜ್ಯಪಾಲರ ಭೇಟಿ ವೇಳೆ ಭಕ್ತರಿಗೆ ದೇವರ ದರ್ಶನವನ್ನು ನಿರ್ಬಂಧಿಸ ಲಾಗಿತ್ತು. ಪೇಟೆಯಾದ್ಯಂತ ಪೊಲೀಸ ರನ್ನು ನಿಯೋಜಿಸಲಾಗಿತ್ತು. ರಾಜ್ಯಪಾಲರು ಕಳೆದ ಜೂನ್‌ನಲ್ಲಿಯೂ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.