Advertisement

ಜನರ ಹೆಣದ ಮೇಲೆ ಸರಕಾರ ಹಣ ಮಾಡುವ ಕೆಲಸ ಮಾಡುತ್ತಿದೆ: ಡಾ. ಶರಣಪ್ರಕಾಶ ಪಾಟೀಲ್ ಆಕ್ರೋಶ

06:57 PM Aug 03, 2020 | sudhir |

ಬೀದರ್ : ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸರ್ಕಾರ ಜನರ ಹೆಣದ ಮೇಲೆ ಹಣ ಮಾಡುತ್ತಿದೆ. ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ಸಾಮಗ್ರಿಗಳ ಖರೀದಿಯ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ತೆರಿಗೆ ಹಣವನ್ನು ಸರ್ಕಾರ ಖರೀದಿ ಹೆಸರಲ್ಲಿ ಲೂಟಿ ಮಾಡಿದೆ. ವಿಪಕ್ಷ ನಾಯಕರು ಖರ್ಚಿನ ಲೆಕ್ಕ ಕೇಳಿದರೆ ಅವರಿಗೆ ನೋಟಿಸ್ ನೀಡಲಾಗಿದೆ. ಇದ್ಯಾವುದಕ್ಕೂ ಕಾಂಗ್ರೆಸ್ ಹೆದರಲ್ಲ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮತ್ತು ಔಷಧ ಸಾಮಗ್ರಿಗಳ ಖರೀದಿಯಲ್ಲಿ 2 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಬಿಜೆಪಿ ಶಾಸಕರೇ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಸಚಿವರುಗಳು ಕೇವಲ ಹಣ ಹೊಡೆಯಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಕೈಮೀರಿ ಹೋಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಹೆಚ್ಚು ಹದಗೆಟ್ಟಿದೆ. ಸೋಂಕು ಹತೋಟಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಸರ್ಕಾರಕ್ಕೆ ಜನರ ಹಿತಾಸಕ್ತಿ ಬೇಕಾಗಿಲ್ಲ. ಕೆಲಸದಲ್ಲಿ ಬದ್ಧತೆ, ಆಡಳಿತದ ಅನುಭವದ ಕೊರತೆ ಸರ್ಕಾರದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ಪ್ರತಿ ಹಂತದಲ್ಲಿ ಸರ್ಕಾರಕ್ಕೆ ಸಹಕಾರ, ಸಲಹೆ ನೀಡುತ್ತಾ ಬಂದಿದೆ. ಆದರೆ, ಸರ್ಕಾರ ಯಾವುದೇ ಕೆಲಸ ಮಾಡದೇ ವ್ಯರ್ಥ ಕಾಲಹರಣ ಮಾಡುತ್ತ ಬಂದಿದೆ. ಸರಿಯಾದ ನಾಯಕತ್ವದ ಇಲ್ಲದೇ ಅಧಿಕಾರಿ ವರ್ಗದವರು ಸಹ ನಿಸ್ಸಾಯಕರಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಮೌನ ವಹಿಸಿದ್ದ ಕಾಂಗ್ರೆಸ್ ಈಗ ಸರ್ಕಾರದ ಕ್ರಮ, ಕಾರ್ಯವೈಖರಿಯಿಂದ ಬೇಸತ್ತು ಪ್ರಶ್ನಿಸುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಔಷಧ ಸರಬರಾಜು ಸರಿಯಾಗಿ ಆಗುತ್ತಿಲ್ಲ. ಖಾಸಗಿ ಕ್ಲಿನಿಕ್‌ಗಳು ಅಗತ್ಯ ಸಹಕಾರ ನೀಡುತ್ತಿಲ್ಲ. ಹೀಗಾದರೆ ಸೋಂಕಿತರು ಚಿಕಿತ್ಸೆಗೆ ಎಲ್ಲಿ ಹೋಗಬೇಕು. ಬೀದರ್ ನಲ್ಲಿ ವೈದ್ಯ ಕಾಲೇಜು, ಹೊಸ ಆಸ್ಪತ್ರೆ ಇದ್ದರೂ ಸಹ ಜಿಲ್ಲೆಯಲ್ಲಿ ಸೋಂಕಿತರ ಮರಣ ಪ್ರಮಾಣ ಹೆಚ್ಚುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಡಾ. ಪಾಟೀಲ, ಸರ್ಕಾರ ಈಗಲಾದರೂ ಎಚ್ಚೆತ್ತು ವೈರಾಣು ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಆಕ್ಸಿಜನ್, ಐಸಿಯು ಬೆಡ್ ಮತ್ತು ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸಬೇಕು. ರೋಗಿಗಳಿಗೆ ಸಮಯಕ್ಕೆ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಂಡು ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next