Advertisement

ಕರ್ನಾಟಕ-ಗೋವಾ ರೈಲ್ವೆ ಹಳಿ ಡಬ್ಲಿಂಗ್‌ ಅನುಮತಿ ರದ್ದು ಪಡಿಸಿದ ಸುಪ್ರೀಂಕೋರ್ಟ್

10:00 PM May 09, 2022 | Team Udayavani |

ನವದೆಹಲಿ : ಕರ್ನಾಟಕದ ಕ್ಯಾಸಲ್‌ ರಾಕ್‌ನಿಂದ ಗೋವಾದ ಕುಲೇಮ್‌ವರೆಗೆ ರೈಲ್ವೆ ಲೈನ್‌ ಡಬ್ಲಿಂಗ್‌ಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್‌ಬಿಡಬ್ಲ್ಯುಎಲ್‌)ಯ ಸ್ಥಾಯಿ ಸಮಿತಿ ನೀಡಿದ್ದ ಅನುಮತಿಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

Advertisement

ಸುಪ್ರೀಂ ಕೋರ್ಟ್‌ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿಯನ್ನು ಆಧರಿಸಿ ನ್ಯಾ.ಎಲ್‌. ನಾಗೇಶ್ವರ ರಾವ್‌ ನೇತೃತ್ವದ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿದೆ. “ದೇಶದ ಮಹತ್ವದ ವನ್ಯಜೀವಿ ಕಾರಿಡಾರ್‌ ಆಗಿರುವ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟದ ಜೀವವ್ಯವಸ್ಥೆಯನ್ನೇ ಈ ರೈಲ್ವೆ ಹಳಿಯು ನಾಶ ಮಾಡಲಿದೆ. ಹೀಗಾಗಿ ಇಲ್ಲಿ ಹಳಿಯ ಡಬ್ಲಿಂಗ್‌ ಸಮರ್ಥನೀಯವಲ್ಲ’ ಎಂದು 2021ರ ಏ.23ರಂದು ಸಲ್ಲಿಸಲಾದ ವರದಿಯಲ್ಲಿ ಸಮಿತಿ ತಿಳಿಸಿತ್ತು.

ಎನ್‌ಬಿಡಬ್ಲ್ಯುಎಲ್‌ ಸ್ಥಾಯಿ ಸಮಿತಿಯು ರೈಲ್ವೆ ಹಳಿ ಡಬ್ಲಿಂಗ್‌ ಮಾತ್ರವಲ್ಲದೇ, ಗೋವಾ-ಕರ್ನಾಟಕ ಗಡಿಭಾಗದ ಅನ್‌ಮೋಡ್‌ನಿಂದ ಮೊಲ್ಲೆಮ್‌ವರೆಗಿನ 4ಎ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥಗೊಳಿಸುವಿಕೆ, ಗೋವಾದ ಸಂಗೋಡ್‌ನಿಂದ ಕರ್ನಾಟಕ ಗಡಿಯವರೆಗೆ 400 ಕೆವಿ ಟ್ರಾನ್ಸ್‌ಮಿಷನ್‌ ಲೈನ್‌ ಅಳವಡಿಸುವ ಯೋಜನೆಗೂ ಅನುಮತಿ ನೀಡಿತ್ತು. ಈಗ ಹಳಿ ಡಬ್ಲಿಂಗ್‌ಗೆ ನೀಡಿದ ಅನುಮತಿಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ್ದು, ಷರತ್ತುಬದ್ಧವಾಗಿ ಹೆದ್ದಾರಿ ವಿಸ್ತರಣೆಗೆ ಅನುಮತಿ ನೀಡಿದೆ. ಜತೆಗೆ, ಈಗಿರುವ 220 ಕೆವಿ ಪವರ್‌ಲೈನ್‌ ಅನ್ನೇ ಬಳಸಿಕೊಂಡು ಹೊಸ 400 ಕೆವಿ ಲೈನ್‌ ಅಳವಡಿಸುವಂತೆಯೂ ಸೂಚಿಸಿದೆ.

ಇದನ್ನೂ ಓದಿ : 228 ಲೀಟರ್‌ ಮದ್ಯ ವಶ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next