Advertisement

ಮೈಸೂರಲ್ಲಿ ಕರ್ನಾಟಕ ಜರ್ಮನ್‌ ತರಬೇತಿ ಸಂಸ್ಥೆ

11:44 AM Jul 16, 2017 | Team Udayavani |

ಮೈಸೂರು: ವಿದ್ಯಾವಂತ ಯುವಜನರು ದೇಶ-ವಿದೇಶಗಳಲ್ಲಿ ಉದ್ಯೋಗ ಹೊಂದಲು ಅಗತ್ಯವಾದ ವೃತ್ತಿ ಕೌಶಲ್ಯ ಒದಗಿಸಲು ಮೈಸೂರಿನಲ್ಲಿ ಕರ್ನಾಟಕ-ಜರ್ಮನ್‌ ತಾಂತ್ರಿಕತೆ ತರಬೇತಿ ಸಂಸ್ಥೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಲಾಮಂದಿರದಲ್ಲಿ ಆಯೋಜಿಸಿರುವ ಎರಡು ದಿನಗಳ ಬೃಹತ್‌ ಉದ್ಯೋಗ ಮೇಳ ಹಾಗೂ ವಿಶಿಷ್ಟ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ಕೌಶಲ್ಯ ತರಬೇತಿ: ಬೆಂಗಳೂರು, ಮಂಗಳೂರು ಭಾಗಗಳಲ್ಲಿ ಜರ್ಮನ್‌ ತಾಂತ್ರಿಕತೆ ತರಬೇತಿ ಸಂಸ್ಥೆಯನ್ನು ಈಗಾಗಲೇ ತೆರೆಯಲಾಗಿದೆ. ಅದೇ ಮಾದರಿಯ ಸಂಸ್ಥೆಯನ್ನು ಮೈಸೂರಿನಲ್ಲೂ ಆರಂಭಿಸಲಾಗುವುದು. ಆ ಸಂಸ್ಥೆಯ ಮೂಲಕ ಯುವಜನತೆಗೆ ವೃತ್ತಿ ಕೌಶಲ್ಯ ತರಬೇತಿ ನೀಡಿ ಪ್ರಪಂಚದ ಯಾವುದೇ ಭಾಗದಲ್ಲಿ ಉದ್ಯೋಗ ದೊರಕಿಸಿಕೊಳ್ಳಬಹುದಾದ ಅವಕಾಶ ಕಲ್ಪಿಸಲಾಗುವುದು ಎಂದರು.

ಸ್ವಉದ್ಯೋಗಕ್ಕೆ ಬ್ಯಾಂಕ್‌ ನೆರವು: ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಅಸಾಧ್ಯ. ಹೀಗಾಗಿ ಸರ್ಕಾರ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಉದ್ಯೋಗಾಂಕ್ಷಿಗಳು ಸ್ವಯಂ ಉದ್ಯೋಗ ಮಾಡಿದರೆ, ಅವರಿಗೆ ಬ್ಯಾಂಕಿನಿಂದ ಸಹ ಅಗತ್ಯ ನೆರವು ಕೊಡಿಸಲಾಗುವುದು. 2020ನೇ ಇಸವಿ ವೇಳೆಗೆ ರಾಜ್ಯದ 1.80 ಕೋಟಿ ಯುವಜನರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಬೃಹತ್‌ ಉದ್ಯೋಗ ಮೇಳ ಆಯೋಜನೆ: ವರ್ಷದಿಂದ ವರ್ಷಕ್ಕೆ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜ ನಗರ ಜಿಲ್ಲೆಗಳನ್ನು ಒಳಗೊಂಡಂತೆ ಬೃಹತ್‌ ಉದ್ಯೋಗ ಮೇಳ ಆಯೋಜಿಸುವ ಜತೆಗೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಆಯೋಜಿಸಿ ಯುವಜನರಿಗೆ ಉದ್ಯೋಗ ಒದಗಿಸಿಕೊಡಿ ಎಂದು ಸಲಹೆ ನೀಡಿದರು.

Advertisement

ಉಚಿತ ತರಬೇತಿ: ಮುಖ್ಯಮಂತ್ರಿಗಳ ಕರ್ನಾಟಕ ಕೌಶಲ್ಯ ಯೋಜನೆಯಡಿ ಇಲಾಖೆ ವತಿಯಿಂದ 3ರಿಂದ 6 ತಿಂಗಳವರೆಗೆ ಉಚಿತ ತರಬೇತಿಯನ್ನು ನೀಡಿ, ತರಬೇತಿಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

5 ಲಕ್ಷ ಮಂದಿಗೆ ತರಬೇತಿ: ಖಾಸಗಿ ಮತ್ತು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಯಾವ ರೀತಿಯ ಕೌಶಲ್ಯ ತರಬೇತಿ ನೀಡಬೇಕು, ಅವರ ಕೌಶಲ್ಯಕ್ಕೆ ತಕ್ಕ ಉದ್ಯೋಗ ದೊರಕಬೇಕು ಎಂಬ ಸದುದ್ದೇಶದಿಂದ ತರಬೇತಿ ನೀಡಲಾಗುತ್ತಿದ್ದು, ಮುಂದಿನ ವರ್ಷ ಈ ಯೋಜನೆಯಡಿ 5 ಲಕ್ಷ ಮಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಮೈಸೂರು ಜಿಲ್ಲೆಯಲ್ಲಿ 25 ಸಾವಿರ ನೋಂದಣಿ ಗುರಿ ಹೊಂದಲಾಗಿತ್ತು. ಈವರೆಗೆ 34,700 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಸಂಸದ ಆರ್‌.ಧ್ರುವನಾರಾಯಣ್‌, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಎಚ್‌.ಪಿ.ಮಂಜುನಾಥ್‌, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಡಾ.ಯತೀಂದ್ರ ಸಿದ್ದರಾಮಯ್ಯ, ಮೇಯರ್‌ಎಂ.ಜೆ.ರವಿಕುಮಾರ್‌, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next