Advertisement

ನಕಲಿ ವೈದ್ಯರ ಹೊಡೆತಕ್ಕೆ ಜನಪದ ವಿವಿ ವೈದ್ಯ ಕೋರ್ಸ್‌ ರದ್ದು!

06:40 AM Aug 06, 2018 | |

ಹಾವೇರಿ: ನಕಲಿ ವೈದ್ಯರ ಸೃಷ್ಟಿಗೆ ಇಂಬು ನೀಡುತ್ತಿದೆ ಎಂಬ ಆರೋಪ ಹೊತ್ತಿದ್ದ ಕರ್ನಾಟಕ ಜಾನಪದ ವಿವಿ “ಜನಪದ ವೈದ್ಯ’ ಸರ್ಟಿಫಿಕೇಟ್‌ ಕೋರ್ಸ್‌ನ್ನು ಪ್ರಸಕ್ತ ಸಾಲಿನಿಂದ ಸಂಪೂರ್ಣ ಕೈ ಬಿಟ್ಟಿದೆ. 

Advertisement

ಈ ಮಹತ್ವದ ನಿರ್ಧಾರದಿಂದಾಗಿ “ಜನಪದ ವೈದ್ಯ’ ಕೋರ್ಸ್‌ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡು ವೈದ್ಯಕೀಯ ಸೇವೆ ನೀಡಲು ಮುಂದಾಗುವ ಭೀತಿ ದೂರವಾಗಿದೆ. ಜತೆಗೆ ಜನಪದ ವೈದ್ಯ ಕೋರ್ಸ್‌ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸೃಷ್ಟಿಸಿ, ವಿದ್ಯಾರ್ಥಿಗಳಿಂದ ಅಕ್ರಮವಾಗಿ ಭಾರೀ ಪ್ರಮಾಣದಲ್ಲಿ ಅಧ್ಯಯನ ಕೇಂದ್ರಗಳು ಹಣ ವಸೂಲು ಮಾಡುವುದಕ್ಕೂ ಕಡಿವಾಣ ಬಿದ್ದಿದೆ.

ಈ ಕೋರ್ಸ್‌ನ ಪ್ರಮಾಣಪತ್ರ ದುರ್ಬಳಕೆ ಬಗ್ಗೆ ಆಯುಷ್‌ ಇಲಾಖೆ ಹಾಗೂ ಜನರಿಂದ ಕೋರ್ಸ್‌ ಬಗ್ಗೆ ವ್ಯಾಪಕವಾಗಿ ಆಪಾದನೆ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾನಪದ ವಿಶ್ವವಿದ್ಯಾಲಯವು ಈ ಕೋರ್ಸ್‌ನ್ನು ಎಲ್ಲ ಅಧ್ಯಯನ ಕೇಂದ್ರಗಳಿಗೆ ಕೊಡದೆ, ವಿವಿಯ ಮುಖ್ಯ ಕ್ಯಾಂಪಸ್‌ ಹಾಗೂ ಬೀದರ್‌, ಜೋಯಿಡಾ ಹಾಗೂ ಮಂಡ್ಯದಲ್ಲಿರುವ ವಿವಿಯ ಅಧಿಕೃತ ಮೂರು ಅಧ್ಯಯನ ಕೇಂದ್ರಗಳಲ್ಲಿ ಮಾತ್ರ ಮುಂದುವರಿಸಿತ್ತು. ಆದರೆ, ಈ ವರ್ಷ ಈ ವಿವಾದಿತ ಕೋರ್ಸ್‌ನ್ನು ಸಂಪೂರ್ಣ ಕೈಬಿಟ್ಟಿದೆ.

ಏನು ವಿವಾದ?:
ಜಾನಪದ ವಿವಿಯಲ್ಲಿ ಒಂದು ವರ್ಷದ (9 ತಿಂಗಳು) “ಜನಪದ ವೈದ್ಯ’ ಎಂಬ ಸರ್ಟಿಫಿಕೇಟ್‌ ಕೋರ್ಸ್‌ ಇತ್ತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಮೇಲೆ ಈ ಕೋರ್ಸ್‌ ಮಾಡಬಹುದಾಗಿತ್ತು. ಈ ಕೋರ್ಸ್‌ನ್ನು ವಿವಿ ರಾಜ್ಯಾದ್ಯಂತ ಇರುವ ಮಾನ್ಯತೆ ಪಡೆದ ಅಧ್ಯಯನ ಕೇಂದ್ರಗಳ ಮೂಲಕವೂ ಕೊಡುತ್ತಿತ್ತು. ಜನಪದ ವೈದ್ಯ ಪ್ರಮಾಣಪತ್ರ ದುರ್ಬಳಕೆ ಮಾಡಿಕೊಂಡು ನಕಲಿ ವೈದ್ಯರಾಗುವವರ ಸಂಖ್ಯೆ ಹಾಗೂ ತಮ್ಮ ನಕಲಿ ವೈದ್ಯಕೀಯಕ್ಕೆ ಇದನ್ನು ಅ ಧಿಕೃತ ಪ್ರಮಾಣ ಪತ್ರದ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು.

ಯಾವ ರೀತಿ ದುರ್ಬಳಕೆ?:
ಕರ್ನಾಟಕ ಜಾನಪದ ವಿವಿ “ಜನಪದ ವೈದ್ಯ’ ಸರ್ಟಿಫಿಕೇಟ್‌ ಕೋರ್ಸ್‌ ನಡೆಸಲು ಪರವಾನಗಿ ಪಡೆದ ಕೆಲ ಅಧ್ಯಯನ ಕೇಂದ್ರಗಳು ಈ ಕೋರ್ಸ್‌ ಮಾಡಿ ವೈದ್ಯಕೀಯ ವೃತ್ತಿ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಹೆಚ್ಚಿನ ಶುಲ್ಕ ಆಕರಿಸುತ್ತಿದ್ದವು. ಇದರ ಜತೆಗೆ ಈ ಕೋರ್ಸ್‌ನ ಪ್ರಮಾಣಪತ್ರ ಪಡೆದ ಕೆಲವರು ಈ ಪ್ರಮಾಣ ಪತ್ರ ಇಟ್ಟುಕೊಂಡು ಹೊಸದಾಗಿ ವೈದ್ಯಕೀಯ ವೃತ್ತಿ ಆರಂಭಿಸಿದ್ದರೆ, ಇನ್ನು ಕೆಲ ನಕಲಿ ವೈದ್ಯರು ಈ ಪ್ರಮಾಣಪತ್ರವನ್ನು ತಮ್ಮ ಅ ಧಿಕೃತ ಅರ್ಹತಾ ಪತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು.

Advertisement

ಆರೋಪ ಸಾಬೀತು:
ಜನಪದ ವೈದ್ಯ ಪ್ರಮಾಣಪತ್ರ ದುರ್ಬಳಕೆ ಹಾಗೂ ಈ ಕುರಿತು ಅಧ್ಯಯನ ಕೇಂದ್ರಗಳ ಮೇಲೆ ನಿಗಾವಹಿಸಿ ವರದಿ ನೀಡಲು ಪೊÅ| ಸಣ್ಣರಾಮ ಅಧ್ಯಕ್ಷತೆಯಲ್ಲಿ ಶೋಧಕ ಸಮಿತಿಯೊಂದನ್ನು ಸಹ ರಚಿಸಿತ್ತು. ಈ ಸಮಿತಿ ಅಧ್ಯಯನ ನಡೆಸಿ, ಈ ಆರೋಪ ಸತ್ಯವಾಗಿದೆ ಎಂದು ವರದಿ ನೀಡಿತ್ತು.

ಮುಚ್ಚಳಿಕೆ ಪತ್ರ:
ಕೋರ್ಸ್‌ ದುರ್ಬಳಕೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿವಿ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳಿಂದ “ಈ ಕೋರ್ಸ್‌ನ್ನು ಜ್ಞಾನಕ್ಕಾಗಿ ಪಡೆದುಕೊಂಡಿದ್ದೇನೆಯೇ ಹೊರತು ವೈದ್ಯಕೀಯ ವೃತ್ತಿಗಾಗಿ ಅಲ್ಲ’ ಎಂಬ ಮುಚ್ಚಳಿಕೆ ಪತ್ರ ಸಹ ಬರೆಸಿಕೊಳ್ಳುವ ನಿರ್ಧಾರ ಸಹ ಕೈಗೊಂಡಿತ್ತು. ಜತೆಗೆ ಪ್ರಮಾಣ ಪತ್ರದಲ್ಲಿಯೂ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸುವ ಬಗ್ಗೆ ತೀರ್ಮಾನ ಕೈಗೊಂಡಿತ್ತು. ಇಷ್ಟಾದರೂ ದುರ್ಬಳಕೆ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ವಿವಿ ಕೋರ್ಸ್‌ ಕೈಬಿಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ.

ಜನಪದ ವೈದ್ಯ ಕೋರ್ಸ್‌ನ್ನು ವೈದ್ಯಕೀಯ ವೃತ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸತ್ಯಶೋಧನಾ ಸಮಿತಿಯ ಅಧ್ಯಯನದಿಂದ ಸಾಬೀತಾಗಿದೆ. ಕೋರ್ಸ್‌ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದರಿಂದ ವಿವಿ ಜನಪದ ವೈದ್ಯ ಕೋರ್ಸ್‌ನ್ನು ಪ್ರಸಕ್ತ ಸಾಲಿನಿಂದ ಕೈಬಿಡಲಾಗಿದೆ.
– ಪ್ರೊ.ಡಿ.ಬಿ. ನಾಯಕ, ಕುಲಪತಿ, ಜಾನಪದ ವಿವಿ

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next