Advertisement

ಬಡ ಕಲಾವಿದನಿಗೆ ಒಲಿದ ಪ್ರಶಸ್ತಿ

03:06 PM Feb 27, 2020 | Team Udayavani |

ಗದಗ: ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ಬಡತನದಲ್ಲೇ ಅರಳಿದ ಜಿಲ್ಲೆಯ ಕಲಾವಿದರೊಬ್ಬರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.

Advertisement

ತಾಲೂಕಿನ ನೀಲಗುಂದ ಗ್ರಾಮದ ಕಂಚಿನ ಕಂಠದ ಜನಪದ ಕಲಾವಿದ ನಾಗರಾಜ ಜಕ್ಕಮ್ಮನವರ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ-2019ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಸತತ ನಾಲ್ಕು ದಶಕಗಳ ಕಾಲ ಜಾನಪದ ಕಲೆಯನ್ನೇ ಬದುಕಾಗಿಸಿಕೊಂಡಿದ್ದ ನಾಗರಾಜ ಜಕ್ಕಮ್ಮನವರ, ಬಾಲ್ಯದಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ನಾಗರಾಜ ನೀಲಪ್ಪ ಜಕ್ಕಮ್ಮನವರ ಅವರು ಹೆಜ್ಜೆ ಹೆಜ್ಜೆಗೂ ಅವಮಾನ, ಸಮಸ್ಯೆಗಳನ್ನು ಎದುರಿಸುವಂತಾಯಿತು. ಗ್ರಾಮದ ಹನುಮಂತ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ ಎಲ್ಲ ನೋವುಗಳನ್ನು ಮರೆಯುವಂತೆ ಮಾಡುವುದರೊಂದಿಗೆ ಜಕ್ಕಮ್ಮನವರ ಅವರನ್ನು ಕಲಾವಿದರನ್ನಾಗಿಸಿತು.

ಬಾಲ್ಯದಿಂದಲೇ ಹಾಡುಗಾರಿಕೆ: ಚಿಕ್ಕಂದಿನಿಂದಲೇ ಸಂಗೀತ ಕಲಿಯುವ ಆಸಕ್ತಿ ಹೊಂದಿದ್ದ ನಾಗರಾಜ ಜಕ್ಕಮ್ಮನವರ ಅವರಿಗೆ ಮೊದಲ ಸಂಗೀತ ಸಾಧನವಾಗಿದ್ದು ಅವರ ಎದೆ. ಅವರು ಸಂಗೀತ ಹಾಡುವಾಗ ತಮ್ಮ ಎದೆಯನ್ನು ಡಗ್ಗವನ್ನಾಗಿ ಬಡಿದುಕೊಳ್ಳುತ್ತಿದ್ದರು. 10-12ರ ವಯಸ್ಸಿನಲ್ಲಿ ಸಂಗೀತ ಅಭ್ಯಾಸಕ್ಕಾಗಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿದ್ದರು. ಆದರೆ, ಅಲ್ಲಿ ಅಂಧರಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಜಕ್ಕಮ್ಮನವರ ಸಂಗೀತ ಕಲಿಕೆಯಬೇಕೆಂಬ ಹಂಬಲಕ್ಕೆ ತಾತ್ಕಾಲಿಕ ಹಿನ್ನಡೆಯಾಯಿತು.

ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜಕ್ಕಮ್ಮನವರ, ಭಜನಾ ಕಾರ್ಯಕ್ರಮಗಳ ಮೂಲಕ ತಮ್ಮ ಸಂಗೀತ ಅಭ್ಯಾಸವನ್ನು ಮುಂದುವರಿಸಿದರು. ಬಳಿಕ ನೀಲಗುಂದ ಗ್ರಾಮದ ದುರ್ಗಾದೇವಿ ಸನ್ನಿ ಧಿಯಲ್ಲಿ ಶ್ರಾವಣ ಮಾಸದಲ್ಲಿ ತಿಂಗಳ ಪೂರ್ತಿ ನಡೆಯುವ ಭಜನಾ ಕಾರ್ಯಕ್ರಮ ಇವರಿಗೆ ಹಾರ್ಮೋನಿಯಂ ಕಲಿಯಲು ಅನುವಾಯಿತು. ಭಜನಾ ತಂಡದಲ್ಲಿದ್ದ ಅವರ ಸಹೋದರ ಮಾವ ಬಸವರಾಜ ಜಕ್ಕಮ್ಮನವರ ಮೊದಲ ಗುರುವಾದರು.

ಹಾರ್ಮೋನಿಯಂ ಕಲಿಯಲೆಂದೇ ಬೆಳಗಿನ ಜಾವ ಒಂದು ಗಂಟೆಗೆ ಎದ್ದು, ದೇವಸ್ಥಾನದನ್ನು ಸ್ವಚ್ಛಗೊಳಿಸುತ್ತಿದ್ದರು. 2 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ತಮಗೆ ತೋಚಿದಂತೆ ಹಾರ್ಮೋನಿಯಂ ನುಡಿಸುತ್ತಿದ್ದರು. ಅದಾದ ನಂತರ ದಿನಕಳೆಂದತೆ ಹಾರ್ಮೋನಿಯಂ ಲಯಬದ್ಧವಾಯಿತು. ನಂತರ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಶ್ರಾವಣ ಮಾಸದುದ್ದಕ್ಕೂ ಗ್ರಾಮದಲ್ಲಿ ನಡೆಯುತ್ತಿದ್ದ ಮೆರವಣಿಗೆ ಹಿರಿಯರೊಂದಿಗೆ ಧ್ವನಿಗೂಡಿಸಿ ಹಾಡುಗಾರಿಕೆಯನ್ನೂ ಕಲಿತರು

Advertisement

ತಿರುವುಕೊಟ್ಟ ಜೈಭೀಂ ತಂಡ : ವರ್ಷಗಳಿಂದ ತಮ್ಮನ್ನು ತಾವು ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ನಾಗರಾಜ ಜಕ್ಕಮ್ಮನವರ ತಮ್ಮ ಸಹೋದರ ಮಾವ ಬಸವರಾಜ ಜಕ್ಕಮ್ಮನವರ ನೇತೃತ್ವದಲ್ಲಿ ನೀಲಗುಂದ ಗ್ರಾಮದಲ್ಲಿ ಜೈಭೀಮ ಗೀಗೀ ಜಾನಪದ ಕಲಾ ತಂಡವನ್ನು ಕಟ್ಟಿಕೊಂಡು, ನೋಂದಣಿ ಮಾಡಿಸಿದರು. ಇದು ನಾಗರಾಜ ಜಕ್ಕಮ್ಮನವರ ಅವರ ಬದುಕಿನಲ್ಲಿ ಮಹತ್ವದ ತಿರುವು ಪಡೆಯಿತು. ದಿನಕಳೆದಂತೆ ಸರಕಾರದ ಕಾರ್ಯಕ್ರಮಗಳು ಜಾತ್ರೆಗಳು ಮತ್ತಿತರೆ ಸಂದರ್ಭದಲ್ಲಿ ಜಾನಪದ ಕಲಾ ಪ್ರದರ್ಶನಕ್ಕೆ ಜೈಭೀಮ ಕಲಾ ತಂಡವನ್ನು ಆಹ್ವಾನಿಸಲಾಗುತ್ತಿತ್ತು.

ಕನಸಿನಲ್ಲೂ ಇದನ್ನು ಊಹಿಸಿರಲಿಲ್ಲ. ಸರಕಾರ ನನ್ನ ಕಲಾ ಸೇವೆಯನ್ನು ಗುರುತಿಸಿ, ಗೌರವಿಸುತ್ತಿರುವುದು ತುಂಬಾ ಸಂತೋ‚ಷವಾಗುತ್ತಿದೆ.  –ನಾಗರಾಜ ಜಕ್ಕಮ್ಮನವರ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

Advertisement

Udayavani is now on Telegram. Click here to join our channel and stay updated with the latest news.

Next