ಗದಗ: ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟು, ಮಕ್ಕಳಿಬ್ಬರಿಗೆ ಗಾಯಗಳಾದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನ.6ರ ಬುಧವಾರ ಬೆಳಿಗ್ಗೆ ನಡೆದಿದೆ.
ಬಾಗಲಕೋಟೆ ಮೂಲದ ಸಿದ್ದರಾಮ ಹಾಗೂ ಹೇಮಾ ದಂಪತಿ ಸಾವನ್ನಪ್ಪಿದ್ದಾರೆ. ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾಗೆ ಗಾಯಗಳಾಗಿವೆ.
ಗಾಯಾಳು ಮಕ್ಕಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಬೆಳ್ಳಂಬೆಳಿಗ್ಗೆ ಈ ರಸ್ತೆ ಅಪಘಾತ ನಡೆದಿದೆ.
ಮೃತ ಕುಟುಂಬ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಲಾರಿ, ಬಾಗಲಕೋಟೆಗೆ ಹೊರಟ್ಟಿದ್ದ ಕಾರು ನಡುವೆ ಅಪಘಾತವಾದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನಕ್ಕೆಂದು ಹೋದವರು ಶಾಶ್ವತವಾಗಿ ದೇವರ ಪಾದ ಸೇರಿದ್ದು, ಮಕ್ಕಳು ಅನಾಥರಾಗಿದ್ದು ನಿಜಕ್ಕೂ ದುರಂತವೇ ಸರಿ.