ಹಾಸನ: ರಾಜಕಾರಣ ಎಂದಿಗೂ ನಿಂತ ನೀರಲ್ಲ. ಕಳೆದ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗಾಗಿಲ್ಲ, ನಾನು ಮತ್ತೆ ಸಿಎಂ ಆಗಬೇಕು ಎಂದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ ವಿಧಾನಸಭೆಯ ಚುನಾವಣೆಯೇ ತನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಏತನ್ಮಧ್ಯೆ ಶುಕ್ರವಾರ ಹೊಳೆನರಸಿಪುರದ ಹಾಡ್ಯ ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಾನು 2ನೇ ಬಾರಿ ಸಿಎಂ ಆಗಬಾರದು ಎಂಬ ಕಾರಣಕ್ಕಾಗಿಯೇ ಎಲ್ಲಾ ವಿರೋಧಿ ಶಕ್ತಿಗಳು ಒಂದಾಗಿದ್ದವು ಎಂದರು.
5 ವರ್ಷದಲ್ಲಿ ಎಲ್ಲಾ ಜಾತಿ, ಧರ್ಮ ಬಡವರ ಪರವಾಗಿ ಯೋಜನೆ ರೂಪಿಸಿ ಕೊಟ್ಟಿತ್ತು. ಆದರೂ ಜನ ನಮ್ಮನ್ನು ಬೆಂಬಲಿಸಿಲ್ಲ. ಇಂದಿನ ರಾಜಕೀಯ ಹಣ, ಜಾತಿಯ ಮೇಲೆ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
ಬೆಂಬಲ, ತಿರುಗೇಟು:
ಸಿದ್ದರಾಮಯ್ಯನವರ ಈ ಹೇಳಿಕೆಗೆ ಶಾಸಕ ಸುಧಾಕರ್ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರೆ, ಆರ್ ವಿ ದೇಶಪಾಂಡೆ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಕೂಡಾ ಸಿದ್ದರಾಮಯ್ಯನವರ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.