ಬೆಂಗಳೂರು: ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ, ಕರ್ನಾಟಕ 2019-20ನೇ ಸಾಲಿನಲ್ಲಿದ್ದ 6ನೇ ಸ್ಥಾನಕ್ಕಿಂತ ಈ ಬಾರಿ 9ನೇ ಸ್ಥಾನಕ್ಕೆ ಕುಸಿದಿರುವುದು ಆತಂಕಕಾರಿ ವಿಷಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ.
ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ (GHI) ಪ್ರಕಾರ 2020 ರಲ್ಲಿ ಭಾರತ 107 ದೇಶಗಳ ಪೈಕಿ 94 ನೇ ಸ್ಥಾನದಲ್ಲಿತ್ತು. ಈಗ ಈ ಪಟ್ಟಿಯಲ್ಲಿ 116 ದೇಶಗಳಿದ್ದರೆ, ಭಾರತ 101 ನೇ ಸ್ಥಾನಕ್ಕೆ ಕುಸಿದಿದೆ ಎಂದರು.
ಕೈಗೆಟಕುವ ದರದಲ್ಲಿ ಆಹಾರ ಲಭ್ಯತೆ, ಗುಣಮಟ್ಟ, ಸುರಕ್ಷತೆ, ಗ್ರಾಹಕರ ಸಬಲೀಕರಣ, ಆಹಾರದ ತರಬೇತಿ ಮತ್ತು ಸಾಮರ್ಥ್ಯದ ಮಾನದಂಡಗಳ ಆಧಾರದಲ್ಲಿ ರಾಜ್ಯಗಳಿಗೆ ಅಂಕ ನೀಡಲಾಗಿದೆ. ಇಪ್ಪತ್ತು ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 9ನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ಇದು ರಾಜ್ಯದ ಭವಿಷ್ಯತ್ತಿನಲ್ಲಿ ಆಹಾರದ ಕೊರತೆಯ ಬಗ್ಗೆ ನೀಡುತ್ತಿರುವ ಸ್ಪಷ್ಟ ಎಚ್ಚರಿಕೆಯ ಸಂದೇಶ ಎಂದಿದ್ದಾರೆ.
ಇದನ್ನೂ ಓದಿ:ಉಗ್ರನಿಗೆ ಆಶ್ರಯ ನೀಡಿದವರಾರು? ಬೆಂಬಲಕ್ಕೆ ಯಾರಿದ್ದಾರೆ? ಈ ಕುರಿತು ಗೃಹ ಸಚಿವರು ಹೇಳಿದ್ದೇನು
ಜಾಗತಿಕವಾಗಿ ದೇಶದ ಹಸಿವು, ಆಹಾರದ ಕೊರತೆಯ ಪ್ರಮಾಣ ದಿನದಿಂದ ದಿನಕ್ಕೆ ಕಳಪೆಯಾಗುತ್ತಿದ್ದೆ ಎಂದು ಸರ್ಕಾರದ ಅಂಕಿ ಅಂಶಗಳೇ ಸಾಬೀತು ಮಾಡುತ್ತಿವೆ. ಕೈಗೆಟಕುವ ದರದಲ್ಲಿ ಆಹಾರ ವಿಚಾರದಲ್ಲಿ ಪಾಕಿಸ್ತಾನವು (52.6 ಅಂಕ) ಭಾರತಕ್ಕಿಂತ (50.2 ಅಂಕ) ಹೆಚ್ಚಿನ ಅಂಕ ಪಡೆದಿರುವುದು ನಿಜಕ್ಕೂ ಕೇಂದ್ರ ಸರ್ಕಾರದ ಅಸೆಡ್ಡೆತನಕ್ಕೆ ಹಿಡಿದ ಕೈಗನ್ನಡಿ. ರಾಜ್ಯ ಸರ್ಕಾರವೂ ಕೂಡ ಹಿರಿಯಣ್ಣನ ಚಾಳಿ ಎಂಬಂತೆ ಅಗತ್ಯ ಕ್ಷೇತ್ರಗಳ ಕಡೆಗೆ ಗಮನ ಹರಿಸದೇ ನಿರಂತರವಾಗಿ ಆಹಾರ ಸುರಕ್ಷತೆ ಹಾಗೂ ಭದ್ರತೆಯನ್ನ ನಿರ್ಲಕ್ಷ್ಯ ಮಾಡಿರುವ ಕಾರಣಕ್ಕೆ ದೇಶದಲ್ಲಿ ಅತ್ಯಂತ ಕಳಪೆಮಟ್ಟಕ್ಕೆ ಇಳಿದಿದೆ ಎಂದರು.
ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾದೀತು. ನಾಗರಿಕರ ಆಹಾರ ಕ್ರಮ ಆರೋಗ್ಯಕರವಾಗಿಲ್ಲ ಮತ್ತು ದೇಶದಲ್ಲಿ ಪೌಷ್ಟಿಕತೆಯ ಮಟ್ಟವು ಅತ್ಯಂತ ಕಳಪೆಯಾಗಿಯೇ ಮುಂದುವರಿದಿದೆ. ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂದರು.