ಅಹಮದಾಬಾದ್: ವಿಜಯ್ ಹಜಾರೆ ಕೂಟದಲ್ಲಿ ತನ್ನ ಉತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ ಗೇರಿದೆ. ಇಂದು ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 47.1 ಓವರ್ ಗಳಲ್ಲಿ 187 ರನ್ ಗಳಿಸಿದರೆ, ಕರ್ನಾಟಕ ತಂಡವು ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಜಾರ್ಖಂಡ್ ಒಂದು ರನ್ ಆಗುವಷ್ಟರಲ್ಲಿ ಎರಡು ರನ್ ಕಳೆದುಕೊಂಡಿತ್ತು. ಬಳಿಕ ವಿಕೆಟ್ ಕೀಪರ್ ಕುಶಗಾರ 74 ರನ್, ಅನುಕುಲ್ ರಾಯ್ 57 ರನ್ ಗಳಿಸಿದರು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ, ಎಂ.ವೆಂಕಟೇಶ್ ತಲಾ ಮೂರು ವಿಕೆಟ್ ಕಿತ್ತರು.
ಚೇಸಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ ಮತ್ತು ನಿಕಿನ್ ಜೋಸ್ ಅರ್ಧಶತಕದ ನೆರವು ನೀಡಿದರು. ಸಮರ್ಥ್ 53 ರನ್, ಜೋಸ್ 63 ರನ್ ಗಳಿಸಿದರು. ಕರ್ನಾಟಕ ತಂಡವು 40.5 ಓವರ್ ಗಳಲ್ಲಿ ಗುರಿ ತಲುಪಿತು.
ಸೋಮವಾರ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಆಡಲಿದೆ.