ಮೈಸೂರು: ಜನಸಂಘದ ಮೂಲಕ ಉದಯವಾದ ಬಿಜೆಪಿಯನ್ನು ಹಿಂದೆ ಮೂರು ಮತ್ತೂಬ್ಬರ ಪಕ್ಷ ಎಂದು ಪ್ರತಿಪಕ್ಷಗಳು ಗೇಲಿ ಮಾಡುತ್ತಿದ್ದವು. ಆದರೆ, ಇಂದು ಎಲ್ಲರ ಬೆಂಬಲದಿಂದ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಹೇಳಿದರು.
ಗ್ರಾಮಾಂತರ ಬಿಜೆಪಿ ಜಿಲ್ಲಾ ನಿವೃತ್ತ ನೌಕರರ ಪ್ರಕೋಷ್ಠದಿಂದ ಮೈಸೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಕೋಷ್ಠದ ಜಿಲ್ಲಾ ಸಂಚಾಲನ ಸಮಿತಿ ಉದ್ಘಾಟನೆ ಹಾಗೂ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೂರು ಮತ್ತೂಬ್ಬರಿದ್ದಾರೆ ಎಂದು ಹಿಂದೊಮ್ಮೆ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಇಂದು ವಿಶ್ವದಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು,
10 ಕೋಟಿಗೂ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷ್ ವ್ಯಕ್ತಿ ಸ್ಥಾಪಿಸಿದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯಾ ನಂತರ ವಿಸರ್ಜಿಸುವಂತೆ ಗಾಂಧೀಜಿಯೇ ಹೇಳಿದ್ದರು. ಆದರೆ ಹೋರಾಟ ವೇದಿಕೆಯಾಗಿದ್ದ ಕಾಂಗ್ರೆಸ್ ಅನ್ನು ರಾಜಕೀಯ ಲಾಭಕ್ಕಾಗಿ ನೆಹರು ಅವರು ಕಾಂಗ್ರೆಸ್ ಪಕ್ಷವನ್ನಾಗಿ ಮಾಡಿದರು.
ಸದ್ಯ ಕರ್ನಾಟಕ, ಪಂಜಾಬ್ ಹೊರತು ಪಡಿಸಿ ಇಡೀ ದೇಶ ಕಾಂಗ್ರೆಸ್ ಮುಕ್ತವಾಗಿದೆ. ಈ ಚುನಾವಣೆಯಲ್ಲಿ ಕರ್ನಾಟಕವನ್ನೂ ಕಾಂಗ್ರೆಸ್ ಮುಕ್ತ ಮಾಡಲಾಗುವುದು ಎಂದು ಹೇಳಿದರು.
ಮೋದಿ ಜನಮೆಚ್ಚುವ ಆಡಳಿತ: ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ಎಲ್ಲ ವಿಭಾಗಗಳಿಗೂ ಪಕ್ಷವನ್ನು ವಿಸ್ತರಿಸಿದ್ದು, ನಿವೃತ್ತರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ದೇಶದ ಎಲ್ಲ ವರ್ಗದ ಜನರಿಗೂ ಕಾರ್ಯಕ್ರಮಗಳನ್ನು ನೀಡಿದ್ದು, ಜನ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ ಎಂದರು.
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎಂ.ಪುಟ್ಟಬುದ್ದಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಎಂ.ಜಿ.ರಾಮಕೃಷ್ಣಪ್ಪ, ಹೇಮಂತ್‌ಕುಮಾರ್‌ಗೌಡ, ನಿವೃತ್ತ ನೌಕರರ ಜಿಲ್ಲಾ ಸಂಚಾಲಕ ಎಸ್.ಶಂಕರಪ್ಪ, ವಕೀಲ ಉಮೇಶ್, ಗೋಪಾಲರಾವ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.