Advertisement

ಬೊಮ್ಮಾಯಿ ನೇತೃತ್ವದಲ್ಲೇ ಕರ್ನಾಟಕ ಚುನಾವಣೆ

10:55 PM Jan 17, 2023 | Team Udayavani |

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಮುಂದಾಗಿದೆ. ಲಿಂಗಾಯತ ಮತಬ್ಯಾಂಕ್‌ ವಿಚಲಿತವಾಗದಂತೆ ನೋಡಿಕೊಳ್ಳಲು ಈ ತೀರ್ಮಾನಕ್ಕೆ ಪಕ್ಷದ ವರಿಷ್ಠರು ಹಸುರು ನಿಶಾನೆ ತೋರಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

ಹೊಸದಿಲ್ಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಮಂಗಳವಾರ ಸಂಜೆ ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಪ್ರಿಲ್‌-ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ಸಹಿತ ಒಂಭತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಯಿತು.

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ಸಂಪುಟ ವಿಸ್ತರಣೆಯ ಪ್ರಸ್ತಾವವನ್ನು ಕೈಬಿಡುವ ಸಾಧ್ಯತೆಗಳು ಅಧಿಕ ಎನ್ನಲಾಗುತ್ತಿದೆ. ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಬೊಮ್ಮಾಯಿ ನೇತೃತ್ವ ಏಕೆ?
ಒಂಭತ್ತು ರಾಜ್ಯಗಳ ಚುನಾವಣೆಗೆ ಸಂಬಂಧಿಸಿ ಪರಾಮರ್ಶೆ ಹಾಗೂ ಕಾರ್ಯಕಾರಿಣಿ ಮುಕ್ತಾಯದ ಬಳಿಕ ಬಿಜೆಪಿಯ ವರಿಷ್ಠರು ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುವ ಬಗ್ಗೆ ರಾಜ್ಯ ಮುಖಂಡರಿಗೆ ಸೂಚ್ಯವಾಗಿ ಸಂದೇಶ ರವಾನೆ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಜಾತಿ ಲೆಕ್ಕಾಚಾರ ಹಾಗೂ ಪ್ರಾದೇಶಿಕ ಸಂಯೋಜನೆ ಬಗ್ಗೆ ಈಗಾಗಲೇ ಒಂದಷ್ಟು ತಯಾರಿಗಳು ನಡೆದಿವೆ. ಜೆಡಿಎಸ್‌ ಜತೆಗೆ ಒಕ್ಕಲಿಗರು, ಕಾಂಗ್ರೆಸ್‌ ಜತೆ ಅಲ್ಪಸಂಖ್ಯಾಕರು, ಕುರುಬರು ಹಾಗೂ ಒಕ್ಕಲಿಗ ಸಮುದಾಯ ನಿಂತಿವೆ. ಸಿದ್ದರಾಮಯ್ಯ ಅವರ ಅಹಿಂದ ತಕ್ಕಮಟ್ಟಿಗೆ ಈ ಬಾರಿಯೂ ಕೆಲಸ ಮಾಡಬಹುದು. ಹೀಗಾಗಿ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್‌ ಒಗ್ಗಟ್ಟು ಕಾಯ್ದುಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಬೊಮ್ಮಾಯಿ ಸಾರಥ್ಯದಲ್ಲೇ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ ಎಂದು ಮೂಲ ಗಳು ಹೇಳಿವೆ.

ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಾವು ಚುನಾವಣೆ ಎದುರಿಸುತ್ತೇವೆ ಎಂದು ಈ ಹಿಂದೆ ರಾಜ್ಯ ಪ್ರವಾಸ ಸಂದರ್ಭದಲ್ಲಿ ಆಮಿತ್‌ ಶಾ ಘೋಷಣೆ ಮಾಡಿದ್ದರು. ಹೀಗಾಗಿ ಆ ನಿರ್ಧಾರದ ಪ್ರಕಾರ ಮುನ್ನಡೆಯೋಣ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಬೊಮ್ಮಾಯಿ ಉತ್ತಮ ಆಡಳಿತ ನಡೆಸಿದ್ದಾರೆ ಎಂದು ವರಿಷ್ಠರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

ರಾಜ್ಯ ಬಿಜೆಪಿ ಸರಕಾರ ಹಲವು ಜನಪರ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದರೆ ಯೋಜಿತ ಪ್ರಚಾರ ಇನ್ನಷ್ಟು ಸಮರ್ಪಕವಾಗಿ ನಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆಗಳನ್ನು ಇನ್ನಷ್ಟು ಪ್ರಚಾರ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ.

ಸಂಪುಟ ವಿಸ್ತರಣೆ ಮುಗಿದ ಅಧ್ಯಾಯ?
ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಸ್ತಾವವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಕೈಬಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇಂಥ ವಿಚಾರಗಳು ಪ್ರಸ್ತಾವವಾಗುವುದಿಲ್ಲ. ಮಂಗಳವಾರದ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಮುಂದುವರಿಕೆ ವಿಚಾರವೇ ಮುಖ್ಯಾಂಶವಾಗಿತ್ತು. ಕಾರ್ಯಕಾರಿಣಿಯ ಬಳಿಕ ಜೆ.ಪಿ. ನಡ್ಡಾ ಅವರಾಗಲಿ, ಅಮಿತ್‌ ಶಾ ಅವರಾಗಲಿ ರಾಜ್ಯ ನಾಯಕರ ಜತೆ ಈ ವಿಚಾರಕ್ಕೆ ಸಂಬಂಧಿಸಿ ಪ್ರತ್ಯೇಕ ಸಭೆಯನ್ನು ನಡೆಸಿಲ್ಲ ಎಂದು ತಿಳಿದು ಬಂದಿದೆ. ಇನ್ನೆರಡು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಈ ಹಂತದಲ್ಲಿ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರ್ನಾಟಕದ ಮಟ್ಟಿಗೆ ಸಂಪುಟ ವಿಸ್ತರಣೆ ಮುಗಿದ ಅಧ್ಯಾಯ ಎಂದು ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ.

ಮೀಸಲು ವಿಚಾರ ಚರ್ಚೆಯಿಲ್ಲ
ಕರ್ನಾಟಕದ ಮಟ್ಟಿಗೆ ಬಿಸಿಬಿಸಿ ಚರ್ಚಾ ವಸ್ತುವಾಗಿರುವ ಪಂಚಮಸಾಲಿ ಮೀಸಲು ವಿಚಾರದ ಬಗ್ಗೆಯೂ ಚರ್ಚೆ ನಡೆದಿಲ್ಲ. ಆದರೆ ರಾಷ್ಟ್ರೀಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಮುಂದುವರಿದಿರುವ ಜೆ.ಪಿ. ನಡ್ಡಾ ವಿಜಯಪುರಕ್ಕೆ ಇದೇ ತಿಂಗಳು 21ಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಕರೆಯಿಸಿಕೊಂಡು ಕೆಲವು ಸೂಚನೆ ನೀಡುವ ಸಾಧ್ಯತೆ ಇದೆ.

2024ರ ಜೂನ್‌ ವರೆಗೆ ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರದ ಅವಧಿಯನ್ನು 2024ರ ಜೂನ್‌ ವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಮಂಗಳವಾರ ಹೊಸದಿಲ್ಲಿಯಲ್ಲಿ ಮುಕ್ತಾಯಗೊಂಡ ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. 2019ಕ್ಕಿಂತ 2024ರ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಮತ್ತೂಮ್ಮೆ ದಾಖಲೆ ಸ್ಥಾಪಿಸಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ನಡ್ಡಾ ಅಧಿಕಾರಾವಧಿ ವಿಸ್ತರಿಸುವ ಪ್ರಸ್ತಾವ ಮಂಡಿಸಿದರು. ಅದನ್ನು ಅವಿರೋಧವಾಗಿ ಅಂಗೀಕರಿಸಲಾಯಿತು. 2019ರ ಲೋಕಸಭೆ ಚುನಾವಣೆ ವೇಳೆ ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಅವಧಿಯನ್ನು ವಿಸ್ತರಿಸಲಾಗಿತ್ತು.

ಲೋಕಸಭೆ ಚುನಾವಣೆಗೆ ಇನ್ನು 400 ದಿನಗಳು ಬಾಕಿ ಉಳಿದಿವೆ. ಅದನ್ನು ಜನರ ಸೇವೆಗಾಗಿ ಮೀಸಲಾಗಿಡಬೇಕು. ಎಲ್ಲ ವರ್ಗಗಳ ಜನರಿಗೂ ನಮ್ಮ ಸರಕಾರದ ಸಾಧನೆಗಳನ್ನು ತಿಳಿಸಿ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

ನಾಳೆ ಕಲಬುರಗಿ, ಯಾದಗಿರಿಗೆ ಪ್ರಧಾನಿ
ಪ್ರಧಾನಿ ಮೋದಿ ಜ. 19ರಂದು ಯಾದಗಿರಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಬಹುಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ನೂತನವಾಗಿ ರಚಿಸಿರುವ ಕಂದಾಯ ಗ್ರಾಮಗಳ ಫ‌ಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ. ಜತೆಗೆ ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next