ಬೆಂಗಳೂರು: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ತಮ್ಮ ಬೆಂಬಲಿಗರ ಜತೆಗೆ ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದು, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯ ಹಲವು ನಾಯಕರು ಮಂಡ್ಯದಲ್ಲಿ ಪಕ್ಷ ಕಟ್ಟೋಣ ಬನ್ನಿ ಎಂದು ಆಹ್ವಾನಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಅನಾಚಾರ ತಪ್ಪಿಸುವುದಕ್ಕೆ ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿಯನ್ನು ಮಂಡ್ಯದ ಪ್ರಥಮ ಶಕ್ತಿಯಾಗಿ ನಾವು ಬೆಳೆಸುತ್ತೇವೆ ಎಂದು ಹೇಳಿದರು.
ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಮುಖಂಡ ಯೋಗೇಶ್ ಬೆಸ್ತರ್, ರಾಮದುರ್ಗಾ ಕ್ಷೇತ್ರದ ಚಿಕ್ಕರೇವಣ್ಣ, ಶಿವರಾಮೇಗೌಡ ಪುತ್ರ ಚೇತನ್ ಗೌಡ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಗೋಪಾಲಯ್ಯ, ಡಾ| ಸುಧಾಕರ್ ಉಪಸ್ಥಿತರಿದ್ದರು.