Advertisement

ಯಕ್ಷಗಾನದಲ್ಲೊಂದು ಚುನಾವಣಾ ಆಯೋಗದ ಒಡ್ಡೋಲಗ!​​​​​​​

06:20 AM Apr 05, 2018 | Team Udayavani |

ಮಂಗಳೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಇರುವಂತೆಯೇ, ಚುನಾವಣಾ ನೀತಿಸಂಹಿತೆಯ ಬಿಸಿ ಎಲ್ಲೆಡೆ ತಟ್ಟಿದೆ. ಅದರಲ್ಲೂ ಕರಾವಳಿಯ ಗಂಡುಕಲೆ ಯಕ್ಷಗಾನದ ಮೇಲೂ ಇದರ ಪರಿಣಾಮ ಬೀರಿದ್ದು, ಕಲಾವಿದರು ಹಾಗೂ
ಕಲಾಸಕ್ತರಿಗೆ ಕಿರಿಕಿರಿಯಾಗಿದೆ.

Advertisement

ಕರಾವಳಿಯಲ್ಲಿ ಬೇಸಿಗೆ ವೇಳೆ ಯಕ್ಷಗಾನ ಪ್ರದರ್ಶನ ನಿತ್ಯದ ಕಾರ್ಯಕ್ರಮ. ತಿಂಗಳ ಮುಂಚಿತವಾಗಿಯೇ ಮೇಳ ಕಾಯ್ದಿರಿಸಿ ಪ್ರದರ್ಶನ ನಿರ್ಧರಿತವಾಗಿರುತ್ತದೆ. ಆದರೆ, ವಾರದ ಹಿಂದೆ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದು ಯಕ್ಷಗಾನದ ಮೇಲೆಯೇ ಆಯೋಗ ಕಣ್ಣಿಟ್ಟಿರುವುದು ಕರಾವಳಿಯ ಯಕ್ಷಪ್ರೇಮಿಗಳಿಗೆ ಬೇಸರ ತರಿಸಿದೆ.

ತಲೆನೋವು: ಕರಾವಳಿ ಭಾಗದಲ್ಲಿ 40ಕ್ಕೂ ಹೆಚ್ಚು ಮೇಳಗಳು ನಿರಂತರ ಪ್ರದರ್ಶನಗಳನ್ನು ನೀಡುತ್ತಿವೆ. ಇದರ ಜತೆಗೆ ಹವ್ಯಾಸಿ ಸಂಘಟನೆಗಳೂ ಯಕ್ಷಗಾನ ಪ್ರದರ್ಶಿಸುತ್ತವೆ. ಯಕ್ಷಗಾನವನ್ನು ಸಾರ್ವಜನಿಕ ಸಮಾರಂಭ ಎಂದು ಪರಿಗಣಿಸಿ, ಮುಂಚಿತವಾಗಿ ಅನುಮತಿ ಪಡೆಯಬೇಕು ಎಂಬ ನೆಲೆಯಿಂದ ಚುನಾವಣಾ ಆಯೋಗದ ನಿಯಮ ಯಕ್ಷಗಾನ ಆಯೋಜಕರಿಗೆ ತಲೆನೋವಾಗಿ ಪರಿಣಮಿಸಿದೆ.

ನೀತಿ ಸಂಹಿತೆಯ ನೆರಳಿನಿಂದಾಗಿ ಸಾಲಿಗ್ರಾಮದಲ್ಲಿ ಯಕ್ಷಗಾನವನ್ನೇ ರದ್ದುಪಡಿಸಲಾಗಿತ್ತು. ಕಾರ್ಕಳದ ಹೆಬ್ರಿಯಲ್ಲಿ ಸೋಮವಾರ ಯಕ್ಷಗಾನ ಆಯೋಜನೆ ವೇಳೆ ಬಂದ ಚುನಾವಣಾ ಅಧಿಕಾರಿಗಳು ರಾತ್ರಿ 10 ಗಂಟೆಯ ಬಳಿಕ ಮೈಕ್‌ ಬಳಕೆ ಮಾಡುವಂತಿಲ್ಲ ಎಂದು ಸೂಚಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು.

ಯಾಕೆಂದರೆ ಪ್ರದರ್ಶನವಾಗುವುದೇ ರಾತ್ರಿ 10 ಗಂಟೆ ಬಳಿಕ. ಕೋಟ ಪಡುಕೆರೆಯಲ್ಲಿ ಕೂಡ ಇಂತಹ ಘಟನೆ ನಡೆದಿತ್ತು. ಹೀಗಾಗಿ ನೀತಿ ಸಂಹಿತೆ ಬಿಸಿ ಯಕ್ಷಗಾನಕ್ಕೆ ತೊಡಕಾಗಿದೆ.

Advertisement

ವಿಶೇಷವೆಂದರೆ ದ.ಕನ್ನಡದಲ್ಲಿ ಆಟ ನಿಲ್ಲಿಸುವ ಘಟನೆ ಜರುಗಿಲ್ಲ. ಆದರೆ, ಮಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕಾಗಿ ಅನುಮತಿ ಪಡೆಯದೇ ದ್ವಾರ ನಿರ್ಮಿಸಿ, ವಿದ್ಯುತ್‌ ದೀಪ ಅಳವಡಿಸಿರುವುದು ಚುನಾವಣಾ ಅಧಿಕಾರಿಗಳು
ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಆಟದ ವೇಳೆ ನೀಡುವ ಊಟದ ಬಗ್ಗೆಯೂ ಆಯೋಗದ ಗಮನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿಗಳೇ ತಿಳಿಸಿದ್ದಾರೆ.

ಪ್ರಚಾರ ಸೂತ್ರ..!
ಮತ್ತೂಂದೆಡೆ, ಯಕ್ಷಗಾನವನ್ನೇ ಮತದಾನ ಜಾಗೃತಿ ಸೂತ್ರವನ್ನಾಗಿ ಚುನಾವಣಾ ಆಯೋಗ ಬಳಸಿಕೊಂಡಿದೆ.
ಜತೆಗೆ ದಕ್ಷಿಣ ಕನ್ನಡದಲ್ಲಿ ಮತದಾನ ಜಾಗೃತಿ ಕೈಗೊಂಡ “ಸ್ವೀಪ್‌’ ಮೂಲಕ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ
ಗಾಯನದ ಹಾಡನ್ನು ಬಳಸಿಕೊಳ್ಳಲಾಗಿದೆ.

ನೋಟಿಸ್‌ ವಾಪಸ್‌: ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದರ ಸಂಭಾಷಣೆ ರಾಜಕೀಯ ಪ್ರೇರಿತವಾಗಿತ್ತು ಎಂಬ ಕಾರಣ ನೀಡಿ ಅವರನ್ನು ಮುಂದಿನ ಪ್ರದರ್ಶನಗಳಿಗೆ ನಿಯೋಜಿಸದಂತೆ ಸೂಚಿಸಿ ಸ್ಥಳೀಯ ಚುನಾವಣಾಧಿಕಾರಿ ಜಾರಿಗೊಳಿಸಿದ್ದ ನೋಟಿಸ್‌ನ್ನು ಆಯೋಗವೇ ವಾಪಸ್‌ ಪಡೆದುಕೊಂಡು ಪ್ರಕರಣವನ್ನು 
ಸುಖಾಂತ್ಯಗೊಳಿಸಿದೆ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎನ್ನಲಾದ ಈ ಸಂಭಾಷಣೆ ವಾಸ್ತವವಾಗಿ 
ಕಾಸರಗೋಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದ್ದಾಗಿತ್ತು. ಆದರೆ, ಇದು ಮೂಡಬಿದಿರೆ ಸಮೀಪದ 
ಪಡುಮಾರ್ನಾಡಿನಲ್ಲಿ ನಡೆದಿರುವುದಾಗಿ ಸ್ಥಳೀಯ ಚುನಾವಣಾಧಿಕಾರಿ ತಪ್ಪಾಗಿ ಗ್ರಹಿಸಿ, ಕಲಾವಿದರ ವಿರುದ್ಧ ಕಾನೂನು ಕ್ರಮಕ್ಕೆ ನೋಟಿಸ್‌ ನೀಡಿದ್ದರು.

ರಾಜಕೀಯ ಪಕ್ಷಗಳ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುವುದು ನಮ್ಮ ಕರ್ತವ್ಯ. ಯಕ್ಷಗಾನ ಪ್ರದರ್ಶನದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸುವುದು,ಊಟೋಪಚಾರ ನೀಡುವುದು ಸರಿಯಲ್ಲ. ಹೀಗಾಗಿ ಆಟದ ವೇಳೆ ನೀಡುವ ಊಟದ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ.
– ಸಸಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next