Advertisement

Karnataka Election ಜನಾರ್ದನ ರೆಡ್ಡಿ ಬೆಳೆಸಿದವರೇ ಬೆನ್ನಿಗೆ ಚೂರಿ ಹಾಕಿದರು: ಬ್ರಹ್ಮಿಣಿ

03:52 PM Apr 24, 2023 | Team Udayavani |

ಗಂಗಾವತಿ: ಪ್ರಸ್ತುತ ರಾಜಕೀಯದಲ್ಲಿ ಬೇರೆಯವರು ಸ್ವಾರ್ಥಕ್ಕಾಗಿ ಬೆನ್ನಿಗೆ ಚೂರಿ ಹಾಕುವುದು ಸಾಮಾನ್ಯ, ಆದರೆ ಅಪ್ಪ ಕೈಹಿಡಿದು ಬೆಳೆಸಿ ರಾಜಕೀಯ ಸ್ಥಾನಮಾನ ಶ್ರೀಮಂತಿಕೆ ಎಲ್ಲವೂ ಬರುವಂತೆ ಮಾಡಿದ್ದ ವ್ಯಕ್ತಿಗಳು ಮತ್ತು ಆಪ್ತರು ಅಪ್ಪನ ಬೆನ್ನಿಗೆ ಚೂರಿ ಹಾಕಿದ್ದು ಬಹಳ ನೋವಾಗುತ್ತದೆ ಎಂದು ಮಾಜಿ ಸಚಿವ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ರೆಡ್ಡಿ ಹೇಳಿದರು.

Advertisement

ಗಂಗಾವತಿಯ ತಮ್ಮ ನಿವಾಸದಲ್ಲಿ ಉದಯವಾಣಿ ಜತೆ ಮಾತನಾಡಿ,ಗಾಲಿ ಜನಾರ್ದನ ರೆಡ್ಡಿ ಅವರು ದೂರ ದೃಷ್ಟಿಯ ರಾಜಕೀಯ ನಾಯಕರು ಅವರಿಗೆ ಸ್ವಾರ್ಥ ಇಲ್ಲ. ಕನ್ನಡ ನಾಡು ನೆಲ, ಜಲ, ಭಾಷೆ ಮತ್ತು ಧರ್ಮ ಉಳಿವಿಗಾಗಿ ನಿರಂತರ ಕನಸು ಕಂಡು ಅದನ್ನು ನನಸಾಗಿಸುವ ಧೀಮಂತ ನಾಯಕನಾಗಿದ್ದಾರೆ. ಜನಾರ್ದನರೆಡ್ಡಿ ಅವರ ಜತೆಗೆ ರಾಜಕೀಯವಾಗಿ, ಆರ್ಥಿಕವಾಗಿ ಬೆಳೆದು ಅವರ ನೆರಳಿನಲ್ಲಿ ಬದುಕಿ ಬಾಳಿದ ಕೆಲ ಆತ್ಮೀಯರು ಮತ್ತು ಸಂಬಂಧಿಕರು ರಾಜಕೀಯ ಸ್ವಾರ್ಥಕ್ಕಾಗಿ ಇದೀಗ ರೆಡ್ಡಿಯವರ ಬೆನ್ನಿಗೆ ಚೂರಿ ಹಾಕುವಂತಹ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಕನ್ನಡ ನಾಡಿನ ಜನರು ಗಮನಿಸುತ್ತಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ಗಾಲಿ ಜನಾರ್ದನರೆಡ್ಡಿ ಅವರಿಗೆ ರಾಜಕೀಯ ಶಕ್ತಿ ಕೊಡುವ ಮೂಲಕ ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಉತ್ತರ ಮತದಾರರು ನೀಡಲಿದ್ದಾರೆ ಎಂದರು.

ಮುಖ್ಯವಾಗಿ ಬಳ್ಳಾರಿ ನಗರದಲ್ಲಿ ಲಕ್ಷ್ಮಿ ಅರುಣಾ ರೆಡ್ಡಿ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಜನಾರ್ದನರೆಡ್ಡಿ ಅವರು ಜನರ ಪ್ರೀತಿ ಗಳಿಸಿದ್ದಾರೆ. ಪ್ರತಿ ವಾರ್ಡು ಗ್ರಾಮೀಣ ಭಾಗದಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಜನತೆ ಅತ್ಯಂತ ಪ್ರೀತಿ ಗೌರವದ ಮೂಲಕ ಬರ ಮಾಡಿಕೊಳ್ಳುತ್ತಿದ್ದಾರೆ ಇದನ್ನು ಗಮನಿಸಿದರೆ ಗೆಲುವು ಖಚಿತವಾಗುತ್ತಿದೆ ಎಂದರು.

ಉತ್ತರ ಕರ್ನಾಟಕದಲ್ಲಿ 15 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ರಾಜ್ಯದಾದ್ಯಂತ 30 ರಿಂದ 40 ಸ್ಥಾನ ಗೆದ್ದು ಮುಂಬರುವ ಸರ್ಕಾರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಪಾತ್ರ ವಹಿಸಲಿದೆ. ಗಂಗಾವತಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯಿಂದ ರಾಜ್ಯದ ಬೇರೆ ಕಡೆ ಇಲ್ಲಿಂದ ದುಡಿಯಲು ಯುವಕರು ಗುಳೆ ಹೋಗುತ್ತಿದ್ದು ಇದನ್ನು ತಪ್ಪಿಸಲು ಗಂಗಾವತಿ ಭಾಗದಲ್ಲಿ ಕೈಗಾರಿಕೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಜನಾರ್ದನ ರೆಡ್ಡಿ ಅವರು ಯೋಜನೆ ರೂಪಿಸಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಣಾಳಿಕೆ ಹೇಳಿದಂತೆ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಲಿದೆ. ಗಂಗಾವತಿ ಮತ್ತು ಬಳ್ಳಾರಿ ನಗರ ಕ್ಷೇತ್ರದಲ್ಲಿ ತಾನು ಪ್ರತಿ ವಾರ್ಡು ಮತ್ತು ಗ್ರಾಮೀಣ ಭಾಗದಲ್ಲಿ ಪ್ರಚಾರಕ್ಕೆ ತಮ್ಮ ಪತಿ ರಾಜೀವರೆಡ್ಡಿ ಹಾಗೂ ಪಕ್ಷದ ಮುಖಂಡರ ಜತೆಗೂಡಿ ಪ್ರಚಾರ ಮಾಡುತ್ತಿದ್ದು ಜನರ ಸಮಸ್ಯೆ ಗೊತ್ತಾಗಿದೆ. ಇದನ್ನು ತಂದೆ ತಾಯಿ ಅವರ ಹತ್ತಿರ ನಿತ್ಯವೂ ಚರ್ಚೆ ಮಾಡಿ ಮುಂಬರುವ ದಿನಗಳಲ್ಲಿ ಸರಕಾರದ ಯೋಜನೆ ಮೂಲಕ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ ಎಂದರು.

ಉತ್ಸವಗಳು ಕಲೆ ಸಂಸ್ಕೃತಿಗಳ ಅನಾವರಣಗಳ ವೇದಿಕೆ
ಉತ್ಸವಗಳು ಕಲೆ ಸಾಹಿತ್ಯ ಸಂಸ್ಕೃತಿಯ ಅನಾವರಣಗೊಳ್ಳುವ ವೇದಿಕೆಯಾಗಿದ್ದು ಗಾಲಿ ಜನಾರ್ದನ ರೆಡ್ಡಿ ಅವರು ಹಂಪಿ ಉತ್ಸವವನ್ನು ವೈವಿಧ್ಯಮಯ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ವಿಜಯನಗರ ಸಾಮ್ರಾಜ್ಯದಲ್ಲಿ ಆಚರಣೆಯಲ್ಲಿದ್ದ ಕಲೆ ಸಂಸ್ಕೃತಿ ರಂಗಭೂಮಿಯನ್ನು ಮುನ್ನೆಲೆಗೆ ತಂದವರಾಗಿದ್ದಾರೆ.ಬನವಾಸಿ ಉತ್ಸವ ,ಕಿತ್ತೂರು ಉತ್ಸವ ,ಲಕ್ಕುಂಡಿ ಉತ್ಸವ, ಆನೆಗೊಂದಿ ಉತ್ಸವ ,ಬೀದರ್ ಜಿಲ್ಲಾ ಉತ್ಸವ ಹೀಗೆ ಅನೇಕ ಉತ್ಸವಗಳನ್ನು ಆಚರಣೆ ಮಾಡಲು ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಲು ವಿಶೇಷ ಆದೇಶವನ್ನು ಮಾಡಿಸುವಲ್ಲಿ ರೆಡ್ಡಿ ಅವರು ಯಶಸ್ವಿಯಾಗಿದ್ದರು. ಉತ್ಸವದಲ್ಲಿ ಪ್ರತಿವರ್ಷ ಜನರು ಸೇರಿ ಕಲೆ, ಸಾಹಿತ್ಯವನ್ನು ಆಸ್ವಾದನೆ ಮಾಡುತ್ತಾರೆ. ಜೊತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ. ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲಾ, ತಾಲೂಕ ಉತ್ಸವ ನಡೆಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವ ಯೋಜನೆಯನ್ನು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಹೊಂದಿದೆ ಎಂದರು.ಈ ಸಂದರ್ಭದಲ್ಲಿ ಬ್ರಹ್ಮಿಣಿ ಅವರ ಪತಿ ರಾಜೀವರೆಡ್ಡಿ ಉಪಸಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next