Advertisement

Karnataka Election ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕಮಲ ಪಾಳಯ

11:11 PM Apr 23, 2023 | Team Udayavani |

ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, “ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿದ್ದಾರೆ’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿದ್ದು ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದರೆ, ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ವೀರಶೈವ ಜನಾಂಗಕ್ಕೆ ಮಾಡಿದ ಅವಮಾನ: ಅಣ್ಣಾಮಲೈ
ಶಿಡ್ಲಘಟ್ಟ: ಸಿದ್ದರಾಮಯ್ಯ ಅವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಭ್ರಷ್ಟಾಚಾರಕ್ಕೆ ಲಿಂಗಾಯತ ಮುಖ್ಯಮಂತ್ರಿಗಳೇ ಕಾರಣ ಎನ್ನುವ ರೀತಿಯಲ್ಲಿ ಮಾತನಾಡಿರುವುದು ರಾಜ್ಯದ ವೀರಶೈವ ಜನಾಂಗಕ್ಕೆ ಮಾಡಿದ ಅವಮಾನವಾಗಿದ್ದು, ಕೂಡಲೇ ಅವರು ಕ್ಷಮೆ ಯಾಚಿಸಬೇಕೆಂದು ರಾಜ್ಯ ಚುನಾವಣ ಸಹ ಉಸ್ತುವಾರಿ ಅಣ್ಣಾಮಲೈ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ಜನ್ಮದಿನವನ್ನು ಇಡೀ ದೇಶ ಅತ್ಯಂತ ಶ್ರೇಷ್ಠ ರೀತಿಯಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ರಾಜಕಾರಣ ಏನೇ ಇರಲಿ. ಒಂದು ಸಮುದಾಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕು. ಸಿದ್ದರಾಮಯ್ಯ ಅವರ ಹೇಳಿಕೆ ವಿಶ್ವಗುರು ಬಸವಣ್ಣನವರಿಗೆ ಮಾಡಿದ ಅವಮಾನ ಎಂದರು.

ಸಿದ್ದರಾಮಯ್ಯ ಹಿರಿಯ ನಾಯಕರು. ತಮ್ಮ ಹೇಳಿಕೆಯಿಂದ ಲಿಂಗಾಯತ ಸಮುದಾಯದ ಆತ್ಮವನ್ನು ಕಲಕಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಎನ್ನುವುದು ತಪ್ಪು. ಅವರಿಗೆ ಜನರೇ ಪಾಠ ಕಲಿಸುತ್ತಾರೆ.
ಬಸವರಾಜ ಬೊಮ್ಮಾಯಿ, ಸಿಎಂ

ಸಿದ್ದರಾಮಯ್ಯ ಮಾಡಿದ ಆರೋಪವೇ ವೀರಶೈವ ಲಿಂಗಾಯತರನ್ನು ಅವರೆಷ್ಟು ಕನಿಷ್ಠವಾಗಿ ಕಾಣುತ್ತಾರೆ ಎನ್ನುವುದಕ್ಕೆ ಸಾಕ್ಷಿ. ಇದಕ್ಕೆ ಜನರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ.
ಭಗವಂತ ಖೂಬಾ, ಕೇಂದ್ರ ಸಚಿವ

Advertisement

ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್‌ ಪಕ್ಷ ಮಾಡಿದಷ್ಟು ದ್ರೋಹ ಯಾರೂ ಮಾಡಿಲ್ಲ. ಲಿಂಗಾಯತರಿಗೆ ಮಾಡಿದ ದ್ರೋಹದಿಂದಾಗಿ ಅವರ ಸರಕಾರ ಕಳೆದುಕೊಂಡರು. ಸಿದ್ದರಾಮಯ್ಯ ಮಾಡಿದ ತಪ್ಪನ್ನು ಈ ಬಾರಿ ವರುಣಾದಲ್ಲಿ ಅನುಭವಿಸುತ್ತಾರೆ.
ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ

ಲಿಂಗಾಯತ ವಿರೋಧಿ ಸಿದ್ದು ಕ್ಷಮೆ ಯಾಚಿಸಲಿ: ಯತ್ನಾಳ್‌
ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ ಮಾತ್ರಕ್ಕೆ ಬಿಜೆಪಿ ಪಕ್ಷದ ಲಿಂಗಾಯತರ ಡ್ಯಾಂ ಒಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಸೋಲಿಸಲು ಶಿವಕುಮಾರ್‌ ಒಬ್ಬರೇ ಸಾಕು. ಲಿಂಗಾಯತ ನಾಯಕರು ಭ್ರಷ್ಟರು ಎಂದಿರುವ ಸಿದ್ಧರಾಮಯ್ಯ ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರು ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದರು.

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಲಿಂಗಪ್ಪ, ಜೆ.ಎಚ್‌.ಪಟೇಲ್‌, ವೀರೇಂದ್ರ ಪಾಟೀಲ್‌ ಅವರಂಥ ನಾಯಕರು ಭ್ರಷ್ಟಾಚಾರ ಮಾಡಿ¨ªಾರೆಯೇ ಎಂದು ಪ್ರಶ್ನಿಸಿದರಲ್ಲದೆ, ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಆಗ್ರಹಿಸಿದರು. ಅಲ್ಲದೆ, ಕಾಂಗ್ರೆಸ್‌ ನಾಯಕರಿಗೆ ನಿಜಕ್ಕೂ ತಾಕತ್ತಿದ್ದರೆ ಲಿಂಗಾಯತ ನಾಯಕರಿಗೆ ಅದರಲ್ಲೂ ಜಗದೀಶ ಶಟ್ಟರ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

ಸರ್ಫ್ ಹಾಕಿ ತೊಳೆದು ಬಿಟ್ಟಿದ್ದಾರೆ: ಅಶೋಕ್‌
ಕನಕಪುರ: ಮೋದಿ ಎನ್ನುವವರೆಲ್ಲರೂ ಕಳ್ಳರು, ಪಲಾಯನವಾದಿಗಳೆಂದು ರಾಹುಲ್‌ ಗಾಂಧಿ ಸಂಸದ ಸ್ಥಾನ ಕಳೆದುಕೊಂಡು ಜೈಲು ಶಿಕ್ಷೆಗೆ ಗುರಿಯಾದರು. ಸಿದ್ದರಾಮಯ್ಯನವರು ವೀರಶೈವ ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿ ಕಾಂಗ್ರೆಸ್‌ ಅನ್ನು ಸಫ್ì ಹಾಕಿ ತೊಳೆದು ಬಿಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

ತಾಲೂಕಿನಲ್ಲಿ ಚುನಾವಣ ಪ್ರಚಾರದ ವೇಳೆ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಆಗಿದ್ದ ಲಿಂಗಾಯತರೆಲ್ಲರೂ ಭ್ರಷ್ಟರು, ಲೂಟಿಕೋರರು ಎನ್ನುವ ಮೂಲಕ ಬಸವಣ್ಣನವರ ಅನುಯಾಯಿಗಳಾಗಿರುವ ಲಿಂಗಾಯತ ಸಮುದಾಯದ ಲಕ್ಷಾಂತರ ಜನರ ಎದೆಗೆ ಚೂರಿ ಹಾಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮಾಡಿದ ಅವಮಾನಕ್ಕೆ ಲಿಂಗಾಯುತ ಸಮುದಾಯ ಇವರಿಗೆ 20 ವರ್ಷ ಶಿಕ್ಷೆ ಕೊಟ್ಟಿದೆ. ಮತ್ತೆ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿರುವುದು ಕಾಂಗ್ರೆಸ್‌ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ ಎಂದರು.

ಸಿದ್ದು ಕೀಳು ಹೇಳಿಕೆಯಿಂದ”ಕೈ’ ನಿಲುವು ಸ್ಪಷ್ಟ: ಜೋಶಿ
ಹುಬ್ಬಳ್ಳಿ: ಲಿಂಗಾಯತರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಯಾವಾಗ ಯಾವ ಸಮಾಜದ ಮೇಲೆ ಪ್ರೀತಿ ಬಂದು ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಅದು ನಿಜವಾದ ಪ್ರೀತಿ ಅಲ್ಲವೇ ಅಲ್ಲ, ಅದೇನಿದ್ದರೂ ಮತ ತುಷ್ಟೀಕರಣ. ಒಂದೆಡೆ ಕಾಂಗ್ರೆಸ್ಸಿಗರು ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಲಿಂಗಾಯತ ಸಮುದಾಯ ಬಗ್ಗೆಯೇ ಕೀಳಾಗಿ ಮಾತನಾಡುವ ಮೂಲಕ ಕಾಂಗ್ರೆಸ್‌ ಮನೋಭಾವನೆ ಏನೆಂಬುದನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್‌ನವರು, ಶ್ರೀರಾಮ ಮಂದಿರ ಬೇಡ ಎಂದವರು ಇದೀಗ ಉದ್ಘಾಟನೆ ಯಾವಾಗ ಎನ್ನುತ್ತಿದ್ದಾರೆ. ಸೈನಿಕರಲ್ಲಿ ಮುಸ್ಲಿಮರು ಎಷ್ಟು ಎಂದು ಎಣಿಕೆ ಮಾಡಿದವರು, ಬಜೆಟ್‌ ಮೊದಲ ಅಧಿಕಾರ ಮುಸ್ಲಿಮರಿಗೆ ಎಂದವರು, 370 ಕಲಂ ತೆಗೆಯಲು ವಿರೋಧಿಸಿದವರು, ಮೋದಿಯನ್ನು ಕೆಳಗಿಸಲು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳೊಂದಿಗೆ ಚರ್ಚಿಸಿದ ಕಾಂಗ್ರೆಸ್‌ನವರು ಏನೇನೋ ಹೇಳುತ್ತಿದ್ದಾರೆ. ಇಂತಹವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕೆ? ಮುಸ್ಲಿಮರಿಗೆ ಸಂವಿಧಾನದ ಕ್ರಮಗಳಿಗೆ ಪೂರಕವಲ್ಲದ ರೀತಿಯಲ್ಲಿ ನೀಡಲಾಗಿದ್ದ ಮೀಸಲಾತಿ ಹಿಂಪಡೆದು ಲಿಂಗಾಯತರು, ಒಕ್ಕಲಿಗರಿಗೆ ನೀಡಲಾಗಿದೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ವಾಪಸ್‌ ನೀಡುವುದಾಗಿ ಹೇಳುತ್ತಿದ್ದಾರೆ ಎಂದರು.

ಬೊಮ್ಮಾಯಿಯಿಂದ ಭ್ರಷ್ಟಾಚಾರದ ಕಳಂಕ: ಸುರ್ಜೇವಾಲ
ಬೆಂಗಳೂರು: ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಎಚ್‌. ಪಟೇಲ್‌ ಸಹಿತ ರಾಜ್ಯದ ಹಲವು ಮುಖ್ಯಮಂತ್ರಿಗಳು ತಮ್ಮ ಸಮುದಾಯಕ್ಕೆ ಮಾತ್ರವಲ್ಲ; ಇಡೀ ರಾಜ್ಯಕ್ಕೆ ಕೀರ್ತಿ ತಂದವರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಇದನ್ನು ಸ್ವತಃ ಅವರದ್ದೇ ಪಕ್ಷದ ಶಾಸಕ ನೆಹರು ಓಲೇಕಾರ್‌ ಹೇಳಿದ್ದರು. ಇದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಕೇಳಿದರು.

ಬಸವರಾಜ ಬೊಮ್ಮಾಯಿ ಅವರು ತಾವೊಬ್ಬರೇ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ ಭ್ರಮೆಯಿಂದ ಹೊರಬರಬೇಕು. ಬೊಮ್ಮಾಯಿ ತಮ್ಮ 40 ಪರ್ಸೆಂಟ್‌ ಕಮಿಷನ್‌ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿ¨ªಾರೆ. ಹಿಂದಿನ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಎಚ್‌. ಪಟೇಲ್‌ ಅವರಂಥವರನ್ನು ನೋಡಿ ಶೇ. 1ರಷ್ಟಾದರೂ ಕಲಿತಿದ್ದರೆ ಸಾಕಿತ್ತು ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next