ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿರುವ ಕ್ಷೇತ್ರದ ಮತದಾರರ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳು ಅವರನ್ನು ಸ್ನೇಹ ಮಿಲನದ ಹೆಸರಲ್ಲಿ ಒಂದೆಡೆ ಸೇರಿಸುವ ಹಾಗೂ ಸಂಪರ್ಕ ಸಾಧಿಸುವ ಹೊಸ ಸಂಪ್ರದಾಯ ಶುರು ಮಾಡಿದ್ದಾರೆ.
ಸಾಮಾನ್ಯವಾಗಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈ ಹಿಂದಿನ ಚುನಾವಣೆಗಳಲ್ಲಿ ರಾಜಧಾನಿಯಲ್ಲಿರುವ ತಮ್ಮ ಕ್ಷೇತ್ರದ ಮತದಾರರನ್ನು ಅವರ ಕುಟುಂಬಸ್ಥರ ಮೂಲಕ ಮೊಬೈಲ್ ನಂಬರ್ ಪಡೆದು ಸಂಪರ್ಕಿಸುತ್ತಿದ್ದರು. ಮತದಾನದ ದಿನ ಊರಿಗೆ ಬಂದು ತಮ್ಮ ಪರ ಮತ ಚಲಾಯಿಸುವಂತೆ ಕೋರುವ ಜತೆಗೆ ಅವರ ಬರುವಿಕೆಗಾಗಿ ಸಾರಿಗೆ ವೆಚ್ಚ ನೀಡುವ ಇಲ್ಲವೇ ವಾಹನ ವ್ಯವಸ್ಥೆ ಮಾಡುವ ಸಂಪ್ರದಾಯ ಬಹಿರಂಗ ಗುಟ್ಟು ಎಂಬಂತೆ ಬೆಳೆದು ಬಂದಿದೆ.
ಈ ಬಾರಿ ಅಭ್ಯರ್ಥಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜಧಾನಿಯಲ್ಲಿರುವ ತಮ್ಮ ಕ್ಷೇತ್ರದ ಮತದಾರರನ್ನೆಲ್ಲ ಸ್ನೇಹ ಮಿಲನದ ಹೆಸರಲ್ಲಿ ಒಂದೆಡೆ ಸೇರಿ ಅವರನ್ನು ಸೆಳೆಯುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದಕ್ಕಾಗಿ ಯಾವುದೋ ಒಂದು ಕಲ್ಯಾಣ ಮಂಟಪ ಇಲ್ಲವೇ ಸಭಾಭವನದಲ್ಲಿ ಅವರನ್ನು ನಿಗದಿತ ದಿನಾಂಕದಂದು ಕರೆಸಿ, ಊಟೋಪಚಾರದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.
ಸ್ನೇಹ ಮಿಲನದ ಮೂಲಕ ರಾಜಧಾನಿಯಲ್ಲಿರುವ ಕ್ಷೇತ್ರದ ಮತದಾರರ ಸಂಖ್ಯೆಯನ್ನು ಅಭ್ಯರ್ಥಿಗಳು ನಿಖರವಾಗಿ ಅರಿ ಯುವ ಜತೆಗೆ ಅವರನ್ನು ಮತದಾನದ ದಿನ ಕ್ಷೇತ್ರಕ್ಕೆ ಸಾಮೂ ಹಿಕವಾಗಿ ಕರೆತರಲು ಬೇಕಾದ “ವ್ಯವಸ್ಥೆ’ ಮಾಡಲು ಕಾರ್ಯತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ಮತದಾನದ ಉದ್ದೇಶ ದಿಂದಲೇ ಊರಿಗೆ ಬರಲು ಹಿಂದೇಟು ಹಾಕುವವರೂ ಈ ಸಾಮೂಹಿಕ ವ್ಯವಸ್ಥೆಯಲ್ಲಿ ಭಾಗಿಯಾಗಿ ಕ್ಷೇತ್ರಕ್ಕೆ ಬಂದು ತಮ್ಮ ಪರ ಮತದಾನ ಮಾಡಬಹುದು ಎಂಬ ಆಸೆ ಅಭ್ಯರ್ಥಿಗಳದ್ದಾಗಿದೆ.
ಎಚ್.ಕೆ. ನಟರಾಜ