ಕಾರ್ಕಳ: ತಾಲೂಕಿನ ಕೇಂದ್ರಭಾಗವಾಗಿ ರುವ ಪೇಟೆ ಪರಿಸರ ಎಲ್ಲ ರೀತಿಯಿಂದಲೂ ಚಟುವಟಿಕೆಯ ಕೇಂದ್ರವಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ಸಂಖ್ಯೆಗೆ ಅನುಗುಣವಾಗಿ ರಸ್ತೆ ಇಕ್ಕಟ್ಟಾಗಿರುವುದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಸಮಸ್ಯೆ ಯಾಗಿ ಕಾಡುತ್ತಿದೆ. ನಗರ ರಸ್ತೆ ವಿಸ್ತರಣೆ, ಸೂಕ್ತ ಪಾರ್ಕಿಂಗ್ ಕಲ್ಪಿಸಬೇಕು ಎನ್ನುವುದು ಬೆಳೆಯುತ್ತಿರುವ ಕಾರ್ಕಳ ಪಟ್ಟಣದ ಅತ್ಯಾವಶ್ಯಕ ಬೇಡಿಕೆ.
ಕಾರ್ಕಳ ಪೇಟೆಗೆ ಆಗಮಿಸುವುದೆಂದರೆ ಒಂದು ರೀತಿಯ ಭಯ. ಇದಕ್ಕೆ ಕಾರಣ ಕಿರಿದಾದ ಮುಖ್ಯ ರಸ್ತೆಯಿಂದಾಗಿ ಪಾರ್ಕಿಂಗ್ ಅವ್ಯವಸ್ಥೆಗಳು. ಒಂದೆಡೆ ಫುಟ್‌ಪಾತ್ ಇಲ್ಲ, ಇನ್ನೊಂದೆಡೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್. ಕಳೆದ 10 ವರ್ಷಗಳಿಂದ ರಸ್ತೆ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.
ರಸ್ತೆಯ ಇಕ್ಕೆಲಗಳಲ್ಲಿ ಏಳೇಳು ಅಡಿ ಜಾಗ ಬಿಟ್ಟು ಕೊಡಬೇಕು ಎನ್ನುವ ಜಿಲ್ಲಾಡಳಿತದ ನಿರ್ದೇಶನಕ್ಕೆ ಆ ಭಾಗದ ಜನತೆ ಪೂರ್ಣವಾಗಿ ಸ್ಪಂದಿಸಿಲ್ಲ. ಮುಖ್ಯ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಸ್ಥಳಾವಕಾಶದ ಕೊರತೆಯಾಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಿಸಿದೆ. ಜತೆಗೆ ಮುಖ್ಯ ರಸ್ತೆಯ ಇಕ್ಕೆಲದಲ್ಲಿ ಸೂಕ್ತ ಫುಟ್‌ಪಾತ್ ನಿರ್ಮಾ ಣಗೊಳ್ಳದೇ ಇರುವುದರಿಂದ ಪಾದಚಾರಿಗಳು ಎಲ್ಲಿ ನಡೆದಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಹಲವು ಬಸ್‌ಗಳು ಹಳೆ ಬಸ್ ನಿಲ್ದಾಣ ಪ್ರವೇ ಶಿಸುವ ಮುನ್ನ ರಿಕ್ಷಾ ಸ್ಟ್ಯಾಂಡ್ ಬಳಿ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಬಸ್‌ಗಳು ನೇರ ಬಸ್ ನಿಲ್ದಾಣ ಪ್ರವೇಶಿಸುವಂತಾದಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ನಿಯಮ ಪರಿಪಾಲಿಸುವಲ್ಲಿ ಆದೇಶಿ ಸುವರಾರು ಎನ್ನುವುದೇ ಪ್ರಶ್ನೆ.
ಆನೆಕೆರೆಯಿಂದ ಮೂರು ಮಾರ್ಗವಾಗಿ ಹಳೆ ಬಸ್ ನಿಲ್ದಾಣ ಪ್ರವೇಶಿಸುವಾಗ ವಾಹನ ದಟ್ಟಣೆ ಯಿಂದ ಗಂಟೆಗಟ್ಟಲೇ ಕಾಯುವ ದುಃಸ್ಥಿತಿ ಇದೆ. ಸಾಲ್ಮರ ಕಡೆಯಿಂದ ಹಾಗೂ ಆನೆ ಕೆರೆಯಿಂದ ಬರುವ ವಾಹನಗಳು ಮೂರು ಮಾರ್ಗದ ಬಳಿ ಒಟ್ಟುಗೂಡಿ ಮುಂದೆ ಸಾಗುವ ಅನಿವಾರ್ಯತೆ ಇರುವುದರಿಂದ ಅಪಾಯ ಎದುರಾಗುವುದೇ ಹೆಚ್ಚು. ಇನ್ನೊಂದೆಡೆ ಮೂರು ಮಾರ್ಗದಿಂದ ಮಾರುಕಟ್ಟೆ ಸಂಪರ್ಕ ರಸ್ತೆ ಕಿರಿದಾಗಿದ್ದರೂ, ದ್ವಿಚಕ್ರ ವಾಹನ ಹೊರತುಪಡಿಸಿ, ಉಳಿದ ಲಘು ವಾಹನಗಳಾದ ಕಾರು, ರಿûಾ ಆ ಮಾರ್ಗವನ್ನು ಪ್ರವೇಶಿಸುತ್ತಿರುವುದು ನಡೆ ದಾಡಲೂ ಕಷ್ಟವಾಗುತ್ತಿದೆ. ಒಟ್ಟಿನಲ್ಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಹುಕಾಲದ್ದಾಗಿದ್ದು, ರಸ್ತೆ ವಿಸ್ತರಣೆ, ಸೂಕ್ತ ಪಾರ್ಕಿಂಗ್ ಇಂದಿನ ಅಗತ್ಯವಾಗಿದೆ.
ಇನ್ನು ನಗರದ ಒಳಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಮುಖ್ಯ ರಸ್ತೆಗಳ ಒಳಚರಂಡಿ ಚೇಂಬರ್‌ಗಳಲ್ಲಿ ಮಲಿನ ನೀರು ಸೋರಿಕೆಯಾಗಿ ಸಮಸ್ಯೆಗಳು ಉಂಟಾಗುತ್ತಲೇ ಇರುತ್ತದೆ. ಸ್ಥಳೀಯ ನಿವಾಸಿಗಳ ಬಾವಿಗಳು ಕೂಡ ಕಲುಷಿ ತಗೊಳ್ಳುತ್ತಿದೆ. ಬಹುಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಇಲ್ಲಿ ತರುವ ನಿಟ್ಟಿ ಯಲ್ಲಿ ಸಮರ್ಪಕ ಯೋಜನೆ ರೂಪಿಸದೇ ಇರುವುದು ಸಮಸ್ಯೆಯಾಗಿದ್ದು ಈ ಬಗ್ಗೆ ಸೂಕ್ತ ಪರ್ಯಾಯ ವ್ಯವಸ್ಥೆಗಳ ಅಗತ್ಯವಿದೆ. ಸ್ವತ್ಛ, ಸುಂದರ ಕಾರ್ಕಳ ಕನಸು ನಸಾಗುವುದಕ್ಕೆ ಈ ಸಮಸ್ಯೆಗಳೇ ಅಡ್ಡಿಯಾಗಿದೆ.
-ಬಾಲಕೃಷ್ಣ ಭೀಮಗುಳಿ