Advertisement
ಕಾಕತಾಳೀಯವೋ ಎಂಬಂತೆ ತೇಜಸ್ವಿನಿ ಅನಂತಕುಮಾರ್ ಅವರು ಈ ಟ್ವೀಟ್ ಮಾಡುವ ಹಿಂದಿನ ದಿನ ಬಿಜೆಪಿ ಎಂಬ ಮಹಾವೃಕ್ಷದ ಅಂಚುಗಳಲ್ಲಿ ಅನಂತಕುಮಾರ್ ನೆಟ್ಟು ಬೆಳೆಸಿದ ರಾಜಕೀಯದ ಗಿಡಗಳೆಲ್ಲವೂ ಇದೇ ರೀತಿ ಮುದುರಿ, ಬಾಡಿ, ಧರಾಶಾಯಿಯಾಗಿದ್ದವು!
ಹೌದು. ರಾಜ್ಯ ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಹೊಸಮುಖಗಳಿಗೆ ಅವಕಾಶ ನೀಡಿದೆ. ಅದರ ಜತೆಗೆ ಮೊದಲನೆ ಜನರೇಷನ್‌ನ ಎಲ್ಲ ಹಿರಿಯರನ್ನು ಬದಿಗೆ ಸರಿಸಿದೆ. ಇದೆಲ್ಲದರ ಮಧ್ಯೆ ಗಮನಿಸಬೇಕಾದ ಮತ್ತೂಂದು ಸಂಗತಿ ಎಂದರೆ ಅದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಶಿಷ್ಯ ವರ್ಗವನ್ನು ಪಕ್ಷದ ಎಲ್ಲ ಆಯಕಟ್ಟಿನ ಸ್ಥಾನಗಳಷ್ಟೇ ಅಲ್ಲ ಚುನಾವಣಾ ರಾಜಕಾರಣದಿಂದಲೇ ಬದಿಗೆ ಸರಿಸಲಾಗಿದೆ. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ರಾಮದಾಸ್ ಮಾತ್ರವಲ್ಲ ಒಂದು ಕಾಲದಲ್ಲಿ ಅನಂತಕುಮಾರ್ ಆಪ್ತ ಎಂದೇ ಪರಿಗಣಿಸಲ್ಪಟ್ಟಿದ್ದ ಕೆ.ಎಸ್.ಈಶ್ವರಪ್ಪ ಕೂಡಾ ರಾಜಕೀಯದ ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದಾರೆ. 1999, 2004ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಇನ್ನು ಕೆಲವು “ಅನಂತ ಶಿಷ್ಯರು’ ಕೂಡಾ ಈ ಹಿಟ್ ಲಿಸ್ಟ್‌ನಲ್ಲಿ ಇದ್ದಾರೆ ಎಂದೇ ಬಿಜೆಪಿ ಆಂತರಿಕ ಮೂಲಗಳು ವ್ಯಾಖ್ಯಾನಿಸುತ್ತಿವೆ. ಈಗ ಅವರೆಲ್ಲರೂ ನಾನು ಅನಂತಕುಮಾರ್ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೇ ಅಂಜುವಂಥ ಸ್ಥಿತಿ ಬಿಜೆಪಿಯಲ್ಲಿದೆ. ಅಲ್ಲಿಗೆ ರಾಜ್ಯ ಬಿಜೆಪಿಯ ನಾಯಕರೆಲ್ಲರೂ ಹೊಸ ತಲೆಮಾರು, ಹೊಸ ಚಿಂತನೆ ಹಾಗೂ ಹೊಸ ಗುರುಗಳ ಶಿಷ್ಯರಾದಂತಾಗಲಿದೆ. ಈ ರೀತಿಯ ನಿರಾಕರಣೆ ಖುದ್ದು ತೇಜಸ್ವಿನಿಯವರಿಗೂ ಆಗಿದೆ. ಅನಂತಕುಮಾರ್ ಅವರ ಅಕಾಲಿಕ ಮರಣದ ಬಳಿಕ ಬೆಂಗಳೂರು ದಕ್ಷಿಣ ಲೋಕಸಭಾ ಸ್ಥಾನಕ್ಕೆ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ “ಡಿಎನ್‌ಎ ಪಾಲಿಟಿಕ್ಸ್‌ಗೆ’ ಬಿಜೆಪಿಯಲ್ಲಿ ಜಾಗವಿಲ್ಲ ಎಂಬ ವಾದ ಅವರಿಗೆ ಟಿಕೆಟ್ ತಪ್ಪಿಸಿತು. ಆದಾದ ಬಳಿಕ ಈಗ ಎದುರಾಗಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ವಂಚಿತರಾಗಿದ್ದಾರೆ. ಆದರೆ ಯಾವ ವಾದದ ಮೂಲಕ ಅನಂತಕುಮಾರ್ ಕುಟುಂಬ ಹಾಗೂ ಅವರ ಶಿಷ್ಯ ವರ್ಗವನ್ನು ಸಕ್ರಿಯ ರಾಜಕಾರಣದಿಂದ ಬಿಜೆಪಿ ದೂರ ತಳ್ಳಿದೆಯೋ, ಆ ಮಾನದಂಡ ಎಲ್ಲರಿಗೂ ಅನ್ವಯವಾಗಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ.
Related Articles
Advertisement