Advertisement

Karnataka Election 2023: ಕಾಂಗ್ರೆಸ್‌ನಲ್ಲೂ ಹೊಸಮುಖಗಳ ಅದೃಷ್ಟ ಪರೀಕ್ಷೆ

12:51 AM Apr 18, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಘೋಷಣೆ ಮಾಡಿರುವ 3ನೇ ಪಟ್ಟಿಯಲ್ಲಿ 22 ಹೊಸ ಮುಖಗಳು ಕಾಣಿಸಿಕೊಂಡಿವೆ. ಕೆಲವು ಕ್ಷೇತ್ರಗಳಲ್ಲಿ ಯಾರೂ ನಿರೀಕ್ಷೆ ಮಾಡಿರದ ಹೊಸಬರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಕಾಂಗ್ರೆಸ್‌ ಎಲ್ಲ ಸಮುದಾಯಗಳಿಗೂ ಅವಕಾಶ ಕಲ್ಪಿಸಿದೆ. ವಿಶೇಷವೆಂದರೆ ಇವರಲ್ಲಿ ಬಹುತೇಕರಿಗೆ ಕುಟುಂಬ ರಾಜಕೀಯದ ಹಿನ್ನೆಲೆ ಇದೆ.

Advertisement

ಒಟ್ಟಾರೆ 43 ಅಭ್ಯರ್ಥಿಗಳಲ್ಲಿ ತಲಾ 8 ವೀರಶೈವ- ಲಿಂಗಾ ಯತ, ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ 9 ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡ ಲಾಗಿದೆ. ಉಳಿದಂತೆ 3 ಅಲ್ಪಸಂಖ್ಯಾಕರು, ತಲಾ 2 ರೆಡ್ಡಿ ಮತ್ತು ಬಂಟರ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ನೀಡಲಾಗಿದೆ. 11 ಮೀಸಲು ಕ್ಷೇತ್ರಗಳಿವೆ. ಇದರೊಂದಿಗೆ ಕಾಂಗ್ರೆಸ್‌ನ 3 ಪಟ್ಟಿ ಸೇರಿ ಹೊಸ ಮುಖಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿಯೇ ಮೂವರು ಹೊಸಬರಿಗೆ ಟಿಕೆಟ್‌ ನೀಡಲಾಗಿದೆ. ತುಮಕೂರು ಕ್ಷೇತ್ರದಿಂದ ಇಕ್ಬಾಲ್‌ ಅಹಮದ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜಿ.ಹೆಚ್‌. ಷಣ್ಮುಖಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಪಾವಗಡದಿಂದ ಮಾಜಿ ಸಚಿವ ವೆಂಕಟ ರಮಣಪ್ಪ ಪುತ್ರ ಎಚ್‌.ವಿ.ವೆಂಕಟೇಶ್‌ಗೆ ಟಿಕೆಟ್‌ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಎಚ್‌.ಎಂ. ಗಣೇಶಪ್ರಸಾದ್‌ ಅವರಿಗೆ ಇದೇ ಮೊದಲ ಬಾರಿಗೆ ಟಿಕೆಟ್‌ ನೀಡಲಾಗಿದೆ. ಅಂದ ಹಾಗೆ ಇವರು ಮಾಜಿ ಸಚಿವ ದಿ| ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಪುತ್ರ.

ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಎಸ್‌.ಗಂಗಾಧರ್‌ ಎಂಬವರಿಗೆ ಟಿಕೆಟ್‌ ನೀಡಲಾಗಿದೆ. ಇವರು ಎಂಜಿನಿಯರಿಂಗ್‌ ಪದವೀಧರರಾಗಿದ್ದು, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ನಾರಾ ಭರತ್‌ರೆಡ್ಡಿಗೆ ಟಿಕೆಟ್‌ ನೀಡಲಾಗಿದ್ದು, ಇವರು ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಪುತ್ರ. ಬೆಳಗಾವಿ ಜಿಲ್ಲೆಯ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಪ್ರಭಾ ವತಿ ಚಾವಡಿ ಎಂಬವರಿಗೆ ಟಿಕೆಟ್‌ ನೀಡಲಾಗಿದೆ. ಬೆಳಗಾವಿ ಉತ್ತರದಿಂದ ಅಸಿಫ್‌ ಸೇs… ಅವರಿಗೆ ನೀಡಲಾಗಿದ್ದು. ಮಾಜಿ ಶಾಸಕ ಫಿರೋಜ್‌ ಸೇಠ ಸಹೋದರರಾಗಿದ್ದಾರೆ. ರಾಯಭಾಗದಲ್ಲಿ ಮಹಾವೀರ ಮೋಹಿತೆ ಎಂಬವರಿಗೆ ಟಿಕೆಟ್‌ ನೀಡಲಾಗಿದೆ.

Advertisement

ಔರಾದ ಮೀಸಲು ಕ್ಷೇತ್ರದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ನಿವೃತ್ತ ಕೆಎಎಸ್‌ ಅಧಿಕಾರಿ ಡಾ| ಭೀಮಸೇನರಾವ್‌ ಶಿಂಧೆಗೆ ಟಿಕೆಟ್‌ ಘೋಷಿಸಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ  ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ, ಯುವ ಮುಖಂಡ ಬಸವರಾಜ್‌ ವಿ. ಶಿವಗಂಗಾಗೆ ಟಿಕೆಟ್‌ ನೀಡಿದೆ. ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದ 37 ವರ್ಷದ ಇವರು ಶಿವಗಂಗಾ ಗ್ರೂಪ್ಸ್‌ ಮಾಲಕರೂ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕಬ್ಬಡ್ಡಿ ಕ್ರೀಡಾಪಟು ಸಿದ್ದು ಕೊಣ್ಣೂರ ಅವರನ್ನು ಕಣಕ್ಕಿಳಿಸಲಾಗಿದೆ. ಇವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದು, ಹಲವು ಉದ್ಯಮದಲ್ಲೂ ತೊಡಗಿದ್ದಾರೆ. ಇವರಿಗೆ ಯಾವುದೇ  ಚುನಾವಣೆಯ ಅನುಭವವಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ನಯನ ಮೋಟಮ್ಮ ಅವರನ್ನು ಕಣಕ್ಕಿಳಿಸಲಾಗಿದ್ದು, ಇದೇ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಇವರು ಕಾಂಗ್ರೆಸ್‌ ನಾಯಕಿ ಮೋಟಮ್ಮ ಅವರ ಪುತ್ರಿ. ಎಲ್‌ಎಲ್‌ಬಿ, ಎಲ್‌ಎಲ್‌ಎಂ ಪದವಿ ಪಡೆದಿದ್ದು, ವಿವಿಧ ಖಾಸಗಿ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದಲ್ಲಿ ಶ್ರೀದೇವಿ ನಾಯಕಗೆ ಟಿಕೆಟ್‌ ಸಿಕ್ಕಿದೆ. ಇವರು ಮಾಜಿ ಸಂಸದ, ಶಾಸಕ ಎ.ವೆಂಕಟೇಶ ನಾಯಕ ಸೊಸೆ, ಹಾಲಿ ಶಾಸಕ ಕೆ.ಶಿವನಗೌಡ ನಾಯಕಗೆ ಸಂಬಂಧಿಯಾಗಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ನಿಂದ ಸಂಬಂಧಿಗಳ ಕದನ ಮುಂದುವರಿದಂತಾಗಿದೆ.

ಪ್ರದೀಪ್‌ ಈಶ್ವರ್‌ಗೆ ಬಯಸದೇ ಬಂದ ಭಾಗ್ಯ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ವಿರುದ್ಧ ಪ್ರದೀಪ್‌ ಈಶ್ವರ್‌ ಎಂಬ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಬೆಂಗಳೂರಿನಲ್ಲಿ ಪರಿಶ್ರಮ ನೀಟ್‌ ಅಕಾಡೆಮಿ ಮುಖ್ಯಸ್ಥ ರಾಗಿರುವ ಇವರಿಗೆ ಯಾವುದೇ ರಾಜಕಿಯ ಹಿನ್ನಲೆ ಇಲ್ಲ. ಟಿಕೆಟ್‌ಗೆ ಅರ್ಜಿ ಸಲ್ಲಿಸದೇ ಇದ್ದರೂ ಬಯಸದೇ ಬಂದ ಭಾಗ್ಯ.

ನಿವೇದಿತ್‌ ಆಳ್ವಾ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಮಾರ್ಗರೆಟ್‌ ಆಳ್ವಾ ಅವರ ಪುತ್ರ ನಿವೇದಿತ್‌ ಆಳ್ವಾಗೆ ಟಿಕೆಟ್‌ ಕಲ್ಪಿಸಲಾಗಿದೆ. ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದು, ದೇಶದ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಪರ ವಿವಿಧ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ. ರಾಜಕೀಯವಾಗಿ ಪ್ರಭಾವಿ ಮನೆತನದಿಂದ ಬಂದಿರುವ ನಿವೇದಿತ್‌ ಆಳ್ವಾ ಸೋನಿಯಾ, ರಾಹುಲ್‌ ಕುಟುಂಬದ ಆಪ್ತರಲ್ಲೊಬ್ಬರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ನಿವೇದಿತ್‌ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next