Advertisement

Karnataka poll: ಇನ್ನು 18 ದಿನ ಕಣ ಕಲಹ

12:57 AM Apr 22, 2023 | Team Udayavani |

ಬೆಂಗಳೂರು: ಸವದತ್ತಿ-ಯಲ್ಲಮ್ಮ, ಔರಾದ್‌, ಹಾವೇರಿ, ರಾಯಚೂರು, ಶಿವಾಜಿನಗರ ಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯ ವಿಧಾನಸಭೆ ಚುನಾವಣೆಗೆ 219 ಕ್ಷೇತ್ರಗಳಲ್ಲಿ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಶನಿವಾರ ಪೂರ್ಣಗೊಂಡಿದೆ.

Advertisement

4,989 ನಾಮಪತ್ರಗಳು ಕ್ರಮಬದ್ಧವಾಗಿದ್ದು, 3,044 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮೂಲಕ ಇನ್ನು 18 ದಿನಗಳ ಕಾಲ “ಚುನಾವಣ ಕುರುಕ್ಷೇತ್ರ ಯುದ್ಧ’ಕ್ಕೆ ರಾಜ್ಯ ಸಾಕ್ಷಿಯಾಗಲಿದೆ.
ತೀವ್ರ ಕುತೂಹಲ ಮೂಡಿಸಿದ್ದ ಕನಕಪುರ ಕ್ಷೇತ್ರದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಾಮಪತ್ರವೂ ಅಂಗೀಕಾರಗೊಂಡಿದೆ. ಇದರೊಂದಿಗೆ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಸಂಸದ ಡಿ.ಕೆ. ಸುರೇಶ್‌ ಕನಕಪುರದಿಂದ ನಾಮಪತ್ರ ಸಲ್ಲಿಸಿದ್ದರಿಂದ ರಾಜಕೀಯ ವಲಯದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ನಾಮಪತ್ರ ಪರಿಶೀಲನೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಸಚಿವ ಆರ್‌. ಅಶೋಕ್‌ ಸಹಿತ ಬಿಜೆಪಿಯ ಕಾನೂನು ಘಟಕದ ತಂಡ ಶುಕ್ರವಾರ ಮಧ್ಯಾಹ್ನದ ವರೆಗೆ ಕನಕಪುರದಲ್ಲೇ ಬೀಡು ಬಿಟ್ಟಿತ್ತು. ಕಾಂಗ್ರೆಸ್‌ ವಲಯದಲ್ಲೂ ಕೆಪಿಸಿಸಿ ಅಧ್ಯಕ್ಷರ ನಾಮಪತ್ರದ ವಿಚಾರ ಒಂದಷ್ಟು ಆತಂಕ ಮೂಡಿಸಿತ್ತು.

ಅಂತಿಮವಾಗಿ ನಾಮಪತ್ರ ಅಂಗೀಕಾರವಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕರು ನಿರಾಳರಾದರು.

ಬೆಂಗಳೂರಿನ ಚಾಮರಾಜಪೇಟೆ ಯಲ್ಲಿ ತಾಯಿಯ ಹೆಸರು ಉಲ್ಲೇಖ ಇಲ್ಲದ ಕಾರಣ ಜಮೀರ್‌ ಅಹಮದ್‌ ನಾಮಪತ್ರ ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿಯ ಪರ ರುಕ್ಮಾಂಗದ ಒತ್ತಾಯಿಸಿದ ಕಾರಣ ಸ್ವಲ್ಪ ಕಾಲ ಗೊಂದಲ ಮೂಡಿತ್ತು. ಅಂತಿಮವಾಗಿ ಜಮೀರ್‌ ನಾಮ ಪತ್ರವೂ ಅಂಗೀಕೃತವಾಯಿತು. ಯಶ ವಂತಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ ನಾಮಪತ್ರದಲ್ಲಿ ಕೆಲವು ಅಂಶಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಸಚಿವ ಎಸ್‌. ಟಿ. ಸೋಮಶೇಖರ್‌ ಸ್ಥಳೀಯ ಚುನಾವಣ ಅಧಿಕಾರಿಗಳಿಗೆ ಆಕ್ಷೇಪಣೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ರುಜುವಾತು ಪಡಿಸುವ ದಾಖಲೆ ಮತ್ತು ಲಿಖೀತ ಸಮಜಾಯಿಷಿಯನ್ನು ಕೂಡಲೇ ನೀಡುವಂತೆ ಸಚಿವ ಸೋಮಶೇಖರ್‌ಗೆ ಚುನಾವಣ ಅಧಿಕಾರಿಗಳು ಸೂಚಿಸಿ ನಾಮಪತ್ರ ಅಂಗೀಕರಿಸಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಯಿಂದ ಕಣಕ್ಕಿಳಿದಿರುವ ಸತೀಶ್‌ ರೆಡ್ಡಿ ತಮ್ಮ ಪ್ರಮಾಣಪತ್ರದಲ್ಲಿ ಪತ್ನಿ ಹೆಸರಲ್ಲಿರುವ ಹೂಡಿಕೆ ಸಹಿತ ಹಲವು ವಿಚಾರ ಮುಚ್ಚಿಟ್ಟಿದ್ದು, ಆಯೋಗ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೋರ್ಟ್‌ ಮೆಟ್ಟಿಲೇರುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಉಮಾಪತಿ ಗೌಡ ಆಗ್ರಹಿಸಿದ್ದಾರೆ. ಆದರೆ ಅವರ ನಾಮಪತ್ರ ಅಂಗೀಕಾರವಾಗಿದೆ.

Advertisement

113 ನಾಮಪತ್ರ ತಿರಸ್ಕೃತ
ಕ್ರಮಬದ್ಧಗೊಂಡ ನಾಮಪತ್ರಗಳ ಪೈಕಿ 4,607 ಪುರುಷ, 381 ಮಹಿಳೆ ಯರು, ಓರ್ವ ತೃತೀಯ ಲಿಂಗಿ ಕಣದಲ್ಲಿದ್ದಾರೆ. ಬಿಜೆಪಿ-219, ಕಾಂಗ್ರೆಸ್‌-218, ಜೆಡಿಎಸ್‌-207, ಆಪ್‌- 207, ಬಿಎಸ್‌ಪಿ-135, ಸಿಪಿಎಂ-4 ನಾಮಪತ್ರ ಕ್ರಮಬದ್ಧವಾ ಗಿವೆ. ಮಾನ್ಯತೆ ಇಲ್ಲದ ಪಕ್ಷಗಳಿಂದ 720 ನಾಮಪತ್ರ, 1,334 ಪಕ್ಷೇತರರ ನಾಮಪತ್ರ ಕ್ರಮಬದ್ಧವಾಗಿವೆ. ಒಟ್ಟು 5,102 ನಾಮಪತ್ರ 224 ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದು, ನಾಲ್ಕು ಕ್ಷೇತ್ರ ಹೊರತುಪಡಿಸಿ 113 ನಾಮಪತ್ರಗಳು ತಿರಸ್ಕೃತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next