Advertisement
ತಿಮ್ಮಯ್ಯ ನಿವೃತ್ತರಾಗುವಾಗ ಊರಿನ ವರೆಲ್ಲ ಸೇರಿ “ಡಿಡಿಪಿಐ ಸಾಹೇಬರನ್ನು ಕರೆಸ್ತೇವೆ. ಸಮ್ಮಾನಕ್ಕೆ ಒಪ್ಪಿಕೊಳ್ಳಬೇಕು’ ಎಂದರೂ ಸುತಾರಾಂ ಒಪ್ಪಲಿಲ್ಲ. “ಅವತ್ತಿಂದ ವತೆಗೆ ಮಾಡಿದ ಕೆಲಸಕ್ಕೆ ಕೂಲಿ ತಗೊಂಡಿ ದೀನಿ. ಸರಕಾರದೋರು ಕೂಲಿ ಬಟವಾಡೆ ಮಾಡಿದಾರೆ. ನೀವೇನು ಅದಕ್ಕೆ ಸಮ್ಮಾನ ಮಾಡೋದು?’ ಎಂದರು. ಒತ್ತಾಯ ಮಾಡಿ ದಾಗ “ಅಲ್ರಪ್ಪಾ, ಊರ್ನಲ್ಲಿ ಎಷ್ಟೊಂದು ಜನ ಕೂಲಿ ಮಾಡೋರಿಲ್ಲಾ? ಅವ್ರಿಗೆಲ್ಲ ಸಮ್ಮಾನ ಮಾಡಿದಿರಾ? ಇಂಥದ್ದನ್ನೆಲ್ಲ ಹಚ್ಕೋ ಬೇಡಿ’ ಎಂದಿದ್ದರು. ತಿಮ್ಮಯ್ಯನವರ ಬಗೆಗೆ ಆದರ ಮೂಡಿತಾದರೂ ಉತ್ಸಾಹಕ್ಕೆ ಭಂಗ ಬಂದಿತ್ತು. ಆಗ ಒಪ್ಪಿಸಲು ಶಾಸ್ತ್ರಿ ಅವರ ಮನೆಗೆ ಜನರು ಹೋದರು. ತಿಮ್ಮಯ್ಯ ಒಪ್ಪಿಕೊಂಡರು.
Related Articles
Advertisement
ಇದನ್ನೂ ಓದಿ:ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
“ಕಾಮಧೇನುವಿನಂಥ (ನಿಮ್ಮ ಪೈಕಿನೇ) – ಡಿ. ಮಂಜುನಾಥ್ – ಮಂತ್ರಿಯನ್ನಿಟ್ಟುಕೊಂಡು ನನ್ನ ಕೇಳ್ತಿಯಲ್ಲಪ್ಪ’ ಎಂದು ಶಾಸ್ತ್ರಿಗಳು ಹೇಳಿದರು. ದಿಟ್ಟಿಸಿ ನೋಡಿದ ತಿಮ್ಮಯ್ಯ “ಹೊಸದಾಗಿ ಜಾತಿ ಹೇಳ್ಕೊಡ್ತಿಯಾ ನಂಗೆ’ ಎಂದರು. “ಅವರ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಬಹುಶಃ ಎಡವಿದೀನಿ, ತಪ್ ಮಾಡಿದೀನಿ ಎನಿಸುತ್ತದೆ. ಸ್ನೇಹ, ಸಲಿಗೆಯಿಂದ ನಾನಾಡಿದ್ರೂ ಅದು ಅವರಿಗೆ ಅಷ್ಟು ನೋವುಂಟು ಮಾಡುತ್ತೆ’ ಎಂದು ಯೋಚಿಸಿರಲಿಲ್ಲ ಎಂದು ಶಾಸ್ತ್ರಿಗಳು “ಮರೆಯಲಾದೀತೆ?’ ಕೃತಿಯಲ್ಲಿ ಹೇಳಿಕೊಳ್ಳುತ್ತಾರೆ. ತಿಮ್ಮಯ್ಯ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ಹೇಳುವಾಗ ಶಾಸ್ತ್ರಿಗಳು “ಇದು ಅನಗತ್ಯ- ಆದರೂ ಹೇಳಬೇಕಾಗಿದೆ’ ಎಂಬುದನ್ನು ಆವರಣದೊಳಗೆ ಕಾಣಿಸಿ “ನಾನು ಅತ್ಯಂತ ಆದರದಿಂದ ಕಾಣುವ ವ್ಯಕ್ತಿ ತಿಮ್ಮಯ್ಯ’ ಎಂದಿದ್ದಾರೆ. ತಿಮ್ಮಯ್ಯನವರು ಗಾಂಧೀ, ವಿನೋಬಾರ ಬಗ್ಗೆ ಗೌರವ ಹೊಂದಿ ಪರಿಸರವನ್ನು ಆ ಆದರ್ಶಗಳ ಮೂಲಕ ಕಟ್ಟಲು ಯತ್ನಿಸುತ್ತಿದ್ದರು. ಕುಡಿಯಬಾರದು, ವ್ಯರ್ಥ ಕಾಲಯಾಪನೆ ಮಾಡಬಾರದು, ದುಡಿದು ತಿನ್ನಬೇಕೆಂದು ಬೋಧಿಸುವುದಲ್ಲದೆ ಮುತುವರ್ಜಿಯಿಂದ ಜಾರಿಗೆ ತರುತ್ತಿದ್ದರು.
ಈಗ ಪ್ರೌಢ ಶಿಕ್ಷಣ ಸಚಿವರಾಗಿರುವ ಬಿ.ಸಿ. ನಾಗೇಶ್ ಶಾಸಕರಾಗಿರುವಾಗಲೂ ಸ್ವಕ್ಷೇತ್ರವಾದ ತಿಪಟೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದುದು ರೈಲಿನಲ್ಲಿ. ಸಾಮಾನ್ಯವಾಗಿ 150 ಕಿ.ಮೀ.ಗಿಂತ ಹೆಚ್ಚಿಗೆ ದೂರವಿದ್ದರೆ ಮೊದಲ ಆಯ್ಕೆ ರೈಲುಯಾನ. ಬಸ್ ಪ್ರಯಾಣವೂ ಸಾಮಾನ್ಯ. ಕೊರೊನಾ, ನೆರೆಪರಿಹಾರ, ಸ್ವಾತಂತ್ರ್ಯೋತ್ಸವಕ್ಕೆ ಇವರಿಗೆ ಕೊಟ್ಟ ಜಿಲ್ಲೆ ಯಾದಗಿರಿಯಾದ ಕಾರಣ ರೈಲಿನಲ್ಲಿ ಪ್ರಯಾಣಿಸುವುದು ಕಷ್ಟವಾದರೂ ಒಂದು ಬಾರಿ ರೈಲಿನಲ್ಲಿ ಹೋಗಿದ್ದರು. ತೀರಾ ಅನಿವಾರ್ಯವಾದರೆ ಮಾತ್ರ ವಿಮಾನಯಾನ. ಒಟ್ಟಾರೆಯಾಗಿ ಶೇ. 90ರಷ್ಟು ಪ್ರಯಾಣ ರೈಲಿನಲ್ಲಿರುತ್ತದೆ.
ಬೆಂಗಳೂರಿನಿಂದ ಜಿಲ್ಲೆಗಳಿಗೆ ಪ್ರವಾಸ ಮಾಡುವ ಕೆಲವು ಹಿರಿಯ ಅಧಿಕಾರಿಗಳ ಮರ್ಜಿ ಹೀಗಿದೆ: ಇವರು ವಿಮಾನದಲ್ಲಿ ಹಾರಿದರೆ, ಬೆಂಗಳೂರಿನಿಂದ ಸರಕಾರಿ ಕಾರನ್ನು ಖಾಲಿಯಾಗಿ ಚಾಲಕ ಭೂಮಾರ್ಗದಲ್ಲಿ ತರುತ್ತಾರೆ. ವಿಮಾನ ನಿಲ್ದಾಣದಿಂದ ಪಕ್ಕದ ಜಿಲ್ಲೆಗೆ ಈ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಇವರಿಗೆ ವಿಮಾನ ನಿಲ್ದಾಣವಿರುವ ಜಿಲ್ಲಾ ಕೇಂದ್ರದಿಂದ ಸರಕಾರದ ಕಾರಿನ ಸೌಲಭ್ಯವಿದ್ದರೂ ಹೀಗೆ ಜನರ ತೆರಿಗೆಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜಕಾರಣಿಗಳೂ ಇಂಥವರಿದ್ದಾರೆ. ಇಂತಹವರೆದುರು ನಾಗೇಶ್ ನಡೆ ಆದರ್ಶವಾಗಿ ಕಾಣುತ್ತದೆ. ಇಂತಹವರನ್ನು ಸ್ವಾಗತಿಸಲು ಶಾಸಕರೂ ಹಿಂದೇಟು ಹಾಕುವುದುಂಟು, “ಡೌಲು’ ಇಲ್ಲವಲ್ಲ? ಶಿಕ್ಷಣ ಖಾತೆಯಲ್ಲಿ ಹಿಂದಿದ್ದ ಸುರೇಶ ಕುಮಾರ್ ಇದೇ ತರಹದವರು.
ಕಳೆದ ತಿಂಗಳಷ್ಟೇ ಶಿಕ್ಷಕರ ದಿನಾಚರಣೆ ನಡೆದಿದೆ. ಹಿರಿಯ ನಾಗರಿಕರ ದಿನ, ಮಹಿಳಾ ದಿನ, ಮಕ್ಕಳ ದಿನ ಹೀಗೆ ಹಲವು ದಿನಗಳಲ್ಲಿ ಪ್ರಶಸ್ತಿ ಗಿಟ್ಟಿಸಲು ಪ್ರಯತ್ನವೂ ನಡೆಯುತ್ತದೆ. ಪ್ರಾಮಾಣಿಕ ಸಾಧಕರು ಯಾವ ಕಚೇರಿಗೂ ಅಲೆದಾಡುವವರಲ್ಲ. ತಿಮ್ಮಯ್ಯರಂತಹ ಶಿಕ್ಷಕರನ್ನು ಹುಡುಕಿ ಪ್ರಶಸ್ತಿಗೆ ಆಯ್ಕೆ ಮಾಡುವುದನ್ನು, ಈ ಕ್ರಮ ಇತರ ಇಲಾಖೆಗಳಿಗೂ ವಿಸ್ತರಣೆಯಾಗಿ ಮಾದರಿ ರಾಜ್ಯವಾಗುವುದಕ್ಕೆ ಸಚಿವ ನಾಗೇಶ್ ಮುನ್ನುಡಿ ಬರೆಯಬಹುದೆ?
-ಮಟಪಾಡಿ ಕುಮಾರಸ್ವಾಮಿ