Advertisement

ಜಿಟಿಡಿಗೆ ಸಚಿವ ಸ್ಥಾನ ನೀಡಿ ಕಟ್ಟಿ ಹಾಕುವ ಪ್ರಯತ್ನ?

06:50 AM Jun 14, 2018 | |

ಮೈಸೂರು: ಜಿ.ಟಿ. ದೇವೇಗೌಡ ಅವರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿ, ಉದ್ದೇಶ ಪೂರ್ವಕವಾಗಿಯೇ ಉನ್ನತ ಶಿಕ್ಷಣ ಖಾತೆ ನೀಡುವ ಪ್ರಯತ್ನ ನಡೆಯಿತು ಎಂಬ ಚರ್ಚೆಗಳು ನಡೆದಿವೆ.

Advertisement

ನಾಲ್ಕನೇ ಬಾರಿ ಶಾಸಕರಾಗಿ, ಈ ಹಿಂದೆ ಕುಮಾರಸ್ವಾಮಿ ಅವರ ಸಂಪುಟದಲ್ಲೇ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿ, ಸುದೀರ್ಘ‌ ಅವಧಿಗೆ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷರಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಜಿ.ಟಿ.ದೇವೇಗೌಡರನ್ನು ಸಚಿವ ಸ್ಥಾನ ನೀಡಿ ಕಟ್ಟಿ ಹಾಕುವ ಪ್ರಯತ್ನ ನಡೆಯಿತು ಎನ್ನಲಾಗಿದೆ.

ಈಗಾಗಲೇ ಸಹಕಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿರುವ ಜಿ.ಟಿ.ದೇವೇಗೌಡರು ಜನ ಸಾಮಾನ್ಯರಿಗೆ ಹತ್ತಿರವಿದ್ದು ಸೇವೆ ಮಾಡಲು ಅನುಕೂಲವಾಗುವಂತೆ ಪ್ರಬಲವಾದ ಕಂದಾಯ ಅಥವಾ ಇಂಧನ ಖಾತೆ ನೀಡುವಂತೆ ಪಕ್ಷದ
ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು.

ಕಟ್ಟಿಹಾಕುವ ಪ್ರಯತ್ನ: ಆದರೆ, ಜಿ.ಟಿ.ದೇವೇಗೌಡ ಅವರಿಗೆ ಇಷ್ಟವಿಲ್ಲದ ಉನ್ನತ ಶಿಕ್ಷಣ ಖಾತೆಯನ್ನು ನೀಡಿದ್ದರ ಹಿಂದೆ ಗೌಡರ ಕುಟುಂಬದಲ್ಲಿ ಬೇರೆಯದೇ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. ಎಚ್‌.ಡಿ.ದೇವೇಗೌಡರ 
ಸಂಬಂಧಿಯಾಗಿರುವ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರಿಗೆ ಅಧಿಕಾರ ನೀಡುವ 
ಸಲುವಾಗಿಯೇ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಎನ್ನಲಾಗುತ್ತಿದೆ. 8ನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದಕ್ಕಿಂತ, ಜಿ.ಟಿ.ದೇವೇಗೌಡರಿಗೆ ಆ ಖಾತೆಯನ್ನು ಒಪ್ಪಿಕೊಳ್ಳದೇ ಇರಲು ಪ್ರೊ.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಸಚಿವರಿಗೆ
ಸಲಹೆಗಾರರಾಗಿ ನೇಮಿಸಿ ಅಧಿಕಾರ ನೀಡಲು ಮುಂದಾಗಿದ್ದು ಕಾರಣ.

ಸಿದ್ದರಾಮಯ್ಯ ಸರ್ಕಾರದಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಗೃಹ ಸಚಿವರಿಗೆ ಸಲಹೆಗಾರರಾಗಿದ್ದು, ಆಡಳಿತದ ಪ್ರತಿಯೊಂದು ಹಂತದಲ್ಲೂ ಮೂಗು ತೂರಿಸುತ್ತಿದ್ದ ರೀತಿಯಲ್ಲೇ ಅನುಭವಿ ರಾಜಕಾರಣಿಯಾಗಿರುವ ಜಿ.ಟಿ. ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿ, ಪ್ರೊ.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಸಚಿವರಿಗೆ ಸಲಹೆಗಾರರನ್ನಾಗಿ ನೇಮಿಸಿ, ಆ ಖಾತೆಯನ್ನೂ ತಮ್ಮ ಕುಟುಂಬದ ಕೈಯಲ್ಲೇ ಇಟ್ಟುಕೊಳ್ಳಲು ಮುಂದಾಗಿದ್ದೇ,ಜಿಟಿಡಿ ಪ್ರಬಲವಾಗಿ ಆ ಖಾತೆಯನ್ನು ನಿರಾಕರಿಸಲು ಕಾರಣ ಎನ್ನಲಾಗಿದೆ.

Advertisement

ಮೈಸೂರು ವಿವಿ ಕುಲಪತಿ ಸ್ಥಾನದಿಂದ ಕೆಳಗಿಳಿದ ಪ್ರೊ.ರಂಗಪ್ಪ ಅವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಮೈಸೂರಿನ ಚಾಮರಾಜ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗಿತ್ತು.

ಚುನಾವಣೆ ಪ್ರಚಾರದ ವೇಳೆಯೇ ಪ್ರೊ.ರಂಗಪ್ಪ ಅವರು ಗೆದ್ದು, ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ರಚನೆಯಾದರೆ ಉನ್ನತ ಶಿಕ್ಷಣ ಸಚಿವರಾಗಲಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ, ಅವರು ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ
ರಂಗಪ್ಪ ಅವರಿಗೆ ವಿಧಾನಸೌಧದಲ್ಲಿ ಅಧಿಕಾರ ಸ್ಥಾನ ನೀಡುವ ಯತ್ನ ನಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಧಾನಸಭೆ ಚುನಾವಣೆಗೂ ಮುಂಚೆ ಕೃಷಿ ಅಧ್ಯಯನಕ್ಕಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಇಸ್ರೇಲ್‌ಗೆ ಪ್ರವಾಸ ಹೋಗಿದ್ದಾಗ ಪ್ರೊ.ರಂಗಪ್ಪ ಜೊತೆಗಿದ್ದರು. ಕುಮಾರಸ್ವಾಮಿ ಅವರು ಸಿಎಂ ಆದ ಬಳಿಕ ಇತ್ತೀಚೆಗೆ ಇಸ್ರೇಲ್‌ನ ನಿಯೋಗವೊಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದಾಗಲೂ ಪ್ರೊ.ರಂಗಪ್ಪ ಅವರು ಹಾಜರಿದ್ದು ಅಚ್ಚರಿ ಮೂಡಿಸಿದರು.

ಆಡಳಿತದಲ್ಲಿ ಅನುಭವವಿರುವ ತಮ್ಮ ಖಾತೆಯಲ್ಲಿ ಹೊರಗಿನವರ ಹಸ್ತಕ್ಷೇಪ ನಡೆಯಲಿದೆ ಎಂಬ ಕಾರಣಕ್ಕೇ ಜಿ.ಟಿ.ದೇವೇಗೌಡರು ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next