ಮಂಗಳೂರು: ಮಂಗಳೂರು ಡಿಜಿಟಲ್ ಎಕಾನಮಿ ಕ್ಲಸ್ಟರ್‌ನಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಆರಂಭಿಸಲು ಆಸಕ್ತಿ ತೋರಿಸಿ ಸೌದಿಯ 25ಕ್ಕೂ ಅಧಿಕ ಕಂಪೆನಿಗಳು ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿವೆ ಎಂದು ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್) ಮಂಗಳೂರು ಕ್ಲಸ್ಟರ್‌ನ ಲೀಡ್ ಇಂಡಸ್ಟ್ರಿ ಆ್ಯಂಕರ್ ರೋಹಿತ್ ಭಟ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಅಲ್-ಖೋಬರ್‌ನಲ್ಲಿ ಕೆಡಿಇಎಂ ಸೆ. 7ರಂದು ನಡೆಸಿದ ರೋಡ್‌ಶೋ ವೇಳೆ ಸಂಭವನೀಯ ಹೂಡಿಕೆದಾರರೊಂದಿಗೆ ಫಲಪ್ರದ ಮಾತುಕತೆ ನಡೆದಿದೆ. ರೋಡ್ ಶೋ ಮೂಲಕ ಉದ್ಯಮಿಗಳಿಗೆ ಆಹ್ವಾನ ನೀಡಿದ್ದು ಸುಲಲಿತ ವ್ಯವಹಾರ, ಸುಸ್ಥಿರತೆಯ ವಿಶ್ವಾಸ ನೀಡಿದ್ದೇವೆ.
ರೋಡ್‌ಶೋನಲ್ಲಿ 35ಕ್ಕೂ ಅಧಿಕ ಕಂಪೆನಿಗಳ ಸಿಇಒಗಳು ಸೇರಿದಂತೆ 150ಕ್ಕೂ ಹೆಚ್ಚು ಸಿಎಕ್ಸ್‌ಒಗಳು ಪಾಲ್ಗೊಂಡಿದ್ದರು. 25ಕ್ಕೂ ಅಧಿಕ ಕಂಪೆನಿಗಳು ಲೆಟರ್ ಆಫ್ ಇಂಟೆಂಟ್‌ಗೆ ಸಹಿ ಹಾಕಿವೆ. ಕೆಡಿಇಎಂ ಜತೆಗೆ ನ್ಯಾಸ್ಕಾಂ, ಸಿಐಐ ಮಂಗಳೂರು, ಟಿಐಇ ಮಂಗಳೂರು, ಮೈಕ್ರೋ ಗ್ರಾಫಿಯೋ, ಕೆಸಿಸಿಐ ಮತ್ತು ಮಂಗಳೂರಿನ ಟೆಕ್ ಕಂಪೆನಿಗಳ ಪ್ರತಿನಿಧಿಗಳು ಕೂಡ ನಿಯೋಗದಲ್ಲಿದ್ದರು.
ದ.ಕ., ಉಡುಪಿ, ಉ.ಕ. ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಕ್ಲಸ್ಟರ್‌ನಲ್ಲಿ ಮುಂದಿನ 8ರಿಂದ 12 ತಿಂಗಳುಗಳಲ್ಲಿ 1,000ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಐಟಿ ಸೇವೆ, ಬ್ಯಾಕ್ ಆಫೀಸ್ ಕಾರ್ಯಾಚರಣೆ ಮತ್ತು ಎಂಜಿನಿಯರಿಂಗ್ ವಿನ್ಯಾಸ ಸೇವೆಗಳಿಗಾಗಿ ಮಂಗಳೂರನ್ನು ಪ್ರಮುಖ ಕಾರ್ಯಕ್ಷೇತ್ರವನ್ನಾಗಿಸಲು ಸೌದಿ ಅರೇಬಿಯಾ ಕಂಪೆನಿಗಳು ಆಸಕ್ತಿ ತೋರಿಸಿವೆ.
ಕಳೆದ ಕೆಲವು ವರ್ಷಗಳಿಂದ ಮಂಗಳೂರಿನ ಉದ್ಯಮಿಗಳೊಂದಿಗೆ ಕೆಲಸ ಮಾಡುತ್ತಿರುವ ಕೆಡಿಇಎಂ ಇಲ್ಲಿನ ಕೈಗಾರಿಕಾ ಕ್ಲಸ್ಟರ್‌ನ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಕಳೆದ 18 ತಿಂಗಳಲ್ಲಿ ಮಂಗಳೂರು ಕ್ಲಸ್ಟರ್‌ನಲ್ಲಿ 40ಕ್ಕೂ ಹೆಚ್ಚು ಕಂಪೆನಿಗಳ ಘಟಕಗಳು ಸ್ಥಾಪನೆಯಾಗಿವೆ ಎಂದು ಅವರು
ತಿಳಿಸಿದರು.
ಕ್ರೆಡಾೖ ಅಧ್ಯಕ್ಷ ವಿನೋದ್ ಪಿಂಟೋ, ಕೆಸಿಸಿಐನ ಆಶಿತ್ ಹೆಗ್ಡೆ, ಸಿಐಐ ಉಪಾಧ್ಯಕ್ಷ ಅಜಿತ್ ಕಾಮತ್ ಉಪಸ್ಥಿತರಿದ್ದರು.