Advertisement
ಗೆಲ್ಲಲು ಸೌರಾಷ್ಟ್ರಕ್ಕೆ 279 ರನ್ ಗುರಿ ಸಿಕ್ಕಿತ್ತು. ರವಿವಾರವೇ 3 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿ ಗೆಲುವಿನ ಸಮೀಪ ತಲುಪಿತ್ತು. ಸೋಮವಾರ ಇನ್ನೆರಡು ವಿಕೆಟ್ ಕಳೆದುಕೊಂಡರೂ ಸೌರಾಷ್ಟ್ರಕ್ಕೆ ಅದರಿಂದ ಯಾವ ತೊಂದರೆಯೂ ಆಗಲಿಲ್ಲ. 5 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿದ ಅದು ಭರ್ಜರಿ ಜಯ ಸಾಧಿಸಿತು. ಸೌರಾಷ್ಟ್ರ ಫೆ. 3ರಿಂದ 7ರ ವರೆಗೆ ಜೈಪುರದಲ್ಲಿ ನಡೆಯುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ವಿದರ್ಭವನ್ನು ಎದುರಿಸಲಿದೆ.ರವಿವಾರ ಅಜೇಯರಾಗಿ ಉಳಿದಿದ್ದ ಶೆಲ್ಡನ್ ಜಾಕ್ಸನ್, ಸೋಮವಾರ ಸರಿಯಾಗಿ 100 ರನ್ ಬಾರಿಸಿ ಔಟಾದರು. ಅವರ ಈ 215 ಎಸೆತಗಳ ಅಮೋಘ ಇನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು. ಮತ್ತೂಂದು ಕಡೆ ಚೇತೇಶ್ವರ ಪೂಜಾರ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶಿಸಿದರು. 2ನೇ ಇನಿಂಗ್ಸ್‌ನಲ್ಲಿ ಒಮ್ಮೆ ಜೀವದಾನ ಪಡೆದರೂ, ಉಳಿದಂತೆ ಅವರು ಯಾವುದೇ ತಪ್ಪು ಮಾಡಲಿಲ್ಲ. 266 ಎಸೆತ ನಿಭಾಯಿಸಿದ ಅವರು 131 ರನ್ ಬಾರಿಸಿ ಅಜೇಯರಾಗಿ ಉಳಿದರು.
ಚೇತೇಶ್ವರ್ ಪೂಜಾರ ಎರಡೂ ಇನಿಂಗ್ಸ್‌ಗಳಲ್ಲಿ ಕೀಪರ್‌ಗೆ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಎರಡೂ ಬಾರಿ ಅಂಪಾಯರ್ ಅವರಿಗೆ ಜೀವದಾನ ನೀಡಿದರು. ಈ ಕಳಪೆ ಅಂಪಾಯರಿಂಗ್ ಕರ್ನಾಟಕದ ಸೋಲಿನಲ್ಲಿ ಮುಕ್ತಾಯವಾಯಿತು. ಇದಕ್ಕೆ ಸರಿಯಾಗಿ ಪೂಜಾರ ಕೂಡ ಕ್ರೀಡಾಸ್ಫೂರ್ತಿ ತೋರಲಿಲ್ಲ. ಔಟಾಗಿದ್ದು ಗೊತ್ತಿದ್ದರೂ, ಟೀವಿ ರಿಪ್ಲೇಗಳು ಇದನ್ನು ಸಾಬೀತುಪಡಿಸಿದರೂ ಎರಡೂ ಬಾರಿ ಅವರು ಕ್ರೀಸ್‌ನಿಂದ ಹೊರ ನಡೆಯಲಿಲ್ಲ. ಬದಲಿಗೆ ಅಂಪಾಯರ್ ತೀರ್ಪನ್ನೇ ಅನುಸರಿಸಿದರು. ಇದು ರಾಜ್ಯದ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು.
Related Articles
ಚೇತೇಶ್ವರ್ ಪೂಜಾರ 2ನೇ ಇನಿಂಗ್ಸ್‌ನಲ್ಲಿ 32 ರನ್ ಗಳಿಸಿದ್ದಾಗ, ವಿನಯ್ ಕುಮಾರ್ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್ ನೀಡಿದ್ದು ಸ್ಪಷ್ಟವಾಗಿತ್ತು. ಆದರೂ ನಾಟೌಟ್ ನೀಡಿದ ಅಂಪಾರ್ ಖಲೀದ್ ಸಯ್ಯದ್ ಋಣಾತ್ಮಕ ಅಂಕ ಪಡೆಯಲಿದ್ದಾರೆ. ಮುಂದಿನ ಋತುವಿನಲ್ಲಿ ಕೆಳದರ್ಜೆಗೆ ಇಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಸಯ್ಯದ್ ತಪ್ಪು ತೀರ್ಪಿನಿಂದಾಗಿ ಕರ್ನಾಟಕ ತಂಡ ಫೈನಲ್‌ಗೇರುವ ಅಮೂಲ್ಯ ಅವಕಾಶ ಕಳೆದುಕೊಂಡದ್ದು ಇಲ್ಲಿ ಗಣನೆಗೆ ಬರಲಿದೆ.
Advertisement
ಸಂಕ್ಷಿಪ್ತ ಸ್ಕೋರ್ಕರ್ನಾಟಕ-275 ಮತ್ತು 239 (ಶ್ರೇಯಸ್ ಗೋಪಾಲ್ 61, ಮಾಯಾಂಕ್ ಅಗರ್ವಾಲ್ 46, ಧರ್ಮೇಂದ್ರ ಜಡೇಜ 48ಕ್ಕೆ 5, ಜೈದೇವ್ ಉನಾದ್ಕತ್ 35ಕ್ಕೆ 3). ಸೌರಾಷ್ಟ್ರ-236 ಮತ್ತು 5 ವಿಕೆಟಿಗೆ 279 (ಚೇತೇಶ್ವರ್ ಪೂಜಾರ ಔಟಾಗದೆ 131, ಶೆಲ್ಡನ್ ಜಾಕ್ಸನ್ 100, ವಿನಯ್ ಕುಮಾರ್ 75ಕ್ಕೆ 3).