ಬೆಂಗಳೂರು: ನಾಲ್ಕು ವರ್ಷ ಗಳಿಂದ ಸ್ಥಗಿತಗೊಂಡಿರುವ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಯೋಜನೆಗೆ ಮತ್ತೆ ಚಾಲನೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು,”ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಶಾಲೆ ಯಿಂದ ದೂರ ಉಳಿದ ಮಕ್ಕಳನ್ನು ಸೆಳೆಯಲು ಅನುಕೂಲ ಆಗುವ ಸೈಕಲ್ ವಿತರಣೆ ಯೋಜನೆ ಹಲವು ವರ್ಷ ಗಳಿಂದ ಸ್ಥಗಿತಗೊಂಡಿದೆ. ಯೋಜನೆ ಪುನಾರಂಭಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.
2006-07ರಲ್ಲಿ ಆರಂಭಗೊಂಡ ಈ ಯೋಜನೆಯಡಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಸರಕಾರಿ ಶಾಲಾ ಮಕ್ಕ ಳಿಗೆ ಸರಕಾರದ ವತಿಯಿಂದ ಉಚಿತವಾಗಿ ಸೈಕಲ್‌ಗಳನ್ನು ನೀಡಲಾಗುತ್ತಿತ್ತು. ಇದರಿಂದ ದೂರದ, ಕಾಡಂಚಿನ ಗ್ರಾಮಗಳಲ್ಲಿ, ಯಾವುದೇ ವಾಹನ ವ್ಯವಸ್ಥೆ ಕೂಡ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ತೆರಳಲು ಅನುಕೂಲವಾಗುತ್ತಿತ್ತು.ಆದರೆ 2019ರಿಂದ ಈಚೆಗೆ ಯೋಜನೆ ಸ್ಥಗಿತಗೊಂಡಿದೆ. ಪುನರಾ ರಂಭಿಸುವಂತೆ ಜೆಡಿಎಸ್‌ನ ಮರಿತಿಬ್ಬೇ ಗೌಡ ಮನವಿ ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದಕ್ಕೆ ಮುನ್ನ ಮಾತನಾಡಿದ ಸಿಎಂ, “ನಾನು ಮಂಡಿಸಿದ 14 ಬಜೆಟ್‌ಗಳಲ್ಲಿ ಇದೇ ಮೊದಲ ಬಾರಿಗೆ ಕೊರತೆ ಬಜೆಟ್ ನೀಡಿದ್ದೇನೆ. ಆದರೂ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯಲ್ಲಿದೆ. ಇದಕ್ಕೆ ಪೂರಕವಾಗಿ ಹೇಳುವುದಾದರೆ, ವಿತ್ತೀಯ ಕೊರತೆ ಶೇ. 2.6ರಷ್ಟಿದೆ (ಶೇ. 3ನ್ನು ಮೀರುವಂತಿಲ್ಲ) ಹಾಗೂ ಸಾಲದ ಪ್ರಮಾಣ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ (ಜಿಎಸ್‌ಡಿಪಿ)ಯ ಶೇ. 22.3 (ಶೇ. 25ರ ಒಳಗಿರಬೇಕು)ರಷ್ಟು ಇದೆ. ಬಿಜೆಪಿಯ ಅವಧಿಯಲ್ಲಿ ಆದಾಯ ಕೊರತೆ 15 ಸಾವಿರ ಕೋಟಿ ರೂ. ಇತ್ತು ಎಂದರು.