Advertisement

BJP ಮಾನಹಾನಿ ಪ್ರಕರಣ: ಸಿಎಂ, ಡಿಸಿಎಂಗೆ ಜಾಮೀನು; ಜನಪ್ರತಿನಿಧಿಗಳ ವಿಶೇಷ

10:30 PM Jun 01, 2024 | Team Udayavani |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಪೇಸಿಎಂ ಪೋಸ್ಟರ್‌ ಹಾಗೂ ಬಿಜೆಪಿ ಸರಕಾರ ವಿವಿಧ ಹುದ್ದೆಗಳಿಗೆ ದರ ನಿಗದಿ ಪಡಿಸಿ ಭ್ರಷ್ಟಾಚಾರ ಎಸಗಿದೆ ಎಂಬ ಜಾಹೀರಾತು ನೀಡಿದ ಮಾನನಷ್ಟ ಪ್ರಕರಣದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಖುದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.

Advertisement

ಬಳಿಕ ವಿಚಾರಣೆ ನಡೆಸಿದ ಕೋರ್ಟ್‌ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ಇದೇ ಪ್ರಕರಣದ ನಾಲ್ಕನೇ ಆರೋಪಿ, ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಜೂ. 7ರಂದು ಖುದ್ದು ಹಾಜರಾಗಬೇಕೆಂದು ಕೋರ್ಟ್‌ ಸೂಚಿಸಿದೆ.

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸೆಷನ್ಸ್‌ ಕೋರ್ಟ್‌ ಆವರಣದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಎಂ ಮತ್ತು ಡಿಸಿಎಂ ಹಾಜರಾದರು. ಅನಂತರ 42ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎನ್‌. ಶಿವಕುಮಾರ್‌ ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ಆರಂಭಿಸಿದರು.

ಈ ವೇಳೆ ಇಬ್ಬರಿಗೂ ತಲಾ 50 ಸಾವಿರ ರೂ. ಬಾಂಡ್‌ ಹಾಗೂ 5 ಸಾವಿರ ರೂ. ನಗದು ಶ್ಯೂರಿಟಿ ನೀಡುವಂತೆ ಸೂಚಿಸಿ ಜಾಮೀನು ಆದೇಶ ನೀಡಿದರು.

ಪ್ರಕರಣದಲ್ಲಿ ಮೊದಲನೇ ಆರೋಪಿಯ ಸ್ಥಾನದಲ್ಲಿ ಕೆಪಿಸಿಸಿ ಇರುವುದರಿಂದ ಕೆಪಿಸಿಸಿ ಹೆಸರಿನಲ್ಲೂ 50 ಸಾವಿರ ರೂ. ಬಾಂಡ್‌ ಹಾಗೂ 5 ಸಾವಿರ ರೂ. ನಗದು ಶ್ಯೂರಿಟಿ ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.

Advertisement

ಬಿಜೆಪಿ ಪರ ವಕೀಲ ವಿನೋದ್‌ ಕುಮಾರ್‌ ವಾದ ಮಂಡಿಸಿ, ಕೋರ್ಟ್‌ ಮುಂದೆ ಎಲ್ಲರೂ ಸಮಾನರು. ರಾಹುಲ್‌ ಗಾಂಧಿ ಈ ಹಿಂದೆ ಕೋರ್ಟ್‌ಗೆ ಹಾಜರಾಗುವುದಾಗಿ ಹೇಳಿದ್ದರು. ಈಗ ಚುನಾವಣೆ ಕಾರಣ ನೀಡಿ ಗೈರಾಗಿದ್ದಾರೆ.ಅವರಿಗೆ ವಿನಾಯಿತಿ ನೀಡಬಾರದು ಎಂದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ ಪರ ವಕೀಲರು, ನಮ್ಮ ಕಕ್ಷಿದಾರರು ವಿಪಕ್ಷ ಒಕ್ಕೂಟದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಕಾರಣದಿಂದ ಹಾಜರಾಗಿಲ್ಲ, ಸಿಆರ್‌ಪಿಸಿ ಸೆಕ್ಷನ್‌ 205ರಲ್ಲಿ ಅದಕ್ಕೆ ಅವಕಾಶವಿದೆ. ಅಲ್ಲದೆ ಇದು ಖಾಸಗಿ ದೂರು ಆಗಿದೆ. ಆದ್ದರಿಂದ ಖುದ್ದು ಹಾಜರಿಗೆ ವಿನಾಯಿತಿ ನೀಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ರಾಹುಲ್‌ ಗಾಂಧಿಯವರಿಗೆ ಶನಿವಾರದ ಹಾಜರಾತಿಯಿಂದ ವಿನಾಯಿತಿ ನೀಡಿತು, ಆದರೆ ಜೂ. 7ರಂದು ಖುದ್ದು ಹಾಜರಾಗಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.

ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ
ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹಾಜರಾದ ಹಿನ್ನೆಲೆಯಲ್ಲಿ ನಗರದ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ಕೈಕಟ್ಟಿ ನಿಂತ ಸಿಎಂ, ಡಿಸಿಎಂ
ಕೋರ್ಟ್‌ ಆವರಣ ಪ್ರವೇಶಿಸುತ್ತಿದ್ದಂತೆ ಸಿಎಂ ಮತ್ತು ಡಿಸಿಎಂ ನ್ಯಾಯಾಧೀಶರಿಗೆ ಕೈಮುಗಿದು, ಕೈಕಟ್ಟಿ ನಿಂತಿದ್ದರು. ಆಗ ನ್ಯಾಯಾಧೀಶರು, ಕೋರ್ಟ್‌ ಹಾಲ್‌ನಲ್ಲಿ ಇಷ್ಟೊಂದು ಮಂದಿ ಯಾಕೆ ಬಂದಿದ್ದಾರೆ, ಹಾಜರಾಗಬೇಕಾಗಿರುವವರು ಯಾರು ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್‌ ಪರ ವಕೀಲರು, ಮಾನಹಾನಿ ಪ್ರಕರಣದಲ್ಲಿ ಸಿಎಂ 2 ಮತ್ತು ಡಿಸಿಎಂ 3ನೇ ಆರೋಪಿಯಾಗಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next