ಬೆಂಗಳೂರು: ಬೆಂಬಲ ಬೆಲೆ ಮೂಲಕ ಮೆಕ್ಕೆ ಜೋಳ ಖರೀದಿ ಸಂದರ್ಭದಲ್ಲಿ ಅದನ್ನು ಕರ್ನಾಟಕದಲ್ಲಿ ಪಡಿತರ ವ್ಯವಸ್ಥೆಯಡಿ ವಿತರಣೆಗೆ ಜೋಳ ಖರೀದಿಯೊಂದಿಗೆ ತಾಳೆ ಹಾಕದಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಜೋಳ ಕೆಲವು ಭಾಗದ ಜನರ ಪ್ರಧಾನ ಆಹಾರವಾಗಿರುವುದರಿಂದ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಜೋಳ ಖರೀದಿಸಿ ಅದನ್ನು ಪಡಿತರ ವ್ಯವಸ್ಥೆಯಡಿ ವಿತರಿಸಬೇಕೆಂದು ಕಳೆದ ವರ್ಷ ಕೇಂದ್ರ ಸರ್ಕಾರ ಸೂಚಿಸಿ ತ್ತಲ್ಲದೆ, ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳ ಖರೀದಿಗೆ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಸಾಲಿನಲ್ಲಿ ಬೆಂಬಲ ಬೆಲೆ ಮೂಲಕ ಮೆಕ್ಕೆಜೋಳ ಖರೀದಿ ಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಷರತ್ತು ವಿಧಿಸಿ, ಕರ್ನಾಟಕ ದಲ್ಲಿ ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಡಿ ವಿತರಿಸಲು ಮುಂದಾಗಿರುವುದರಿಂದ ರಾಜ್ಯ ಸರ್ಕಾರವೇ ಖರೀದಿಸಬೇಕು. ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಘೋಷಣೆಯಿಂದ ರೈತರಿಗೆ ಯಾವುದೇ ಅನುಕೂಲ ವಾಗಲಿಲ್ಲ. ಆದ್ದರಿಂದ ಈ ಷರತ್ತು ಸಡಿಲಗೊಳಿಸಿ ರಾಜ್ಯದಲ್ಲೂ ಬೆಂಬಲ ಬೆಲೆ ಮೂಲಕ ಜೋಳ ಖರೀದಿಸಬೇಕು. ಯಾವುದೇ ಕಾರಣಕ್ಕೂ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ರಾಜ್ಯ ಸರ್ಕಾರವೇ ಖರೀದಿಸಬೇಕು ಎಂದು ಹೇಳಬಾರದು ಎಂದು ಕೋರಿದ್ದಾರೆ.
ಇಂದು ಸಂಸದರ ಜತೆ ಸಭೆ
ಬುಧವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಕುಮಾರಸ್ವಾಮಿ ಭೇಟಿಯಾಗಲಿದ್ದಾರೆ. ಅಲ್ಲದೆ, ಸಂಸತ್ ಅಧಿವೇಶನದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಕುರಿತು ಚರ್ಚಿಸಲು ಬುಧವಾರ ಸಂಜೆ ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಭೆ ಕರೆದಿದ್ದಾರೆ.