ಬೆಂಗಳೂರು: ಕನ್ನಡ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ(ನ25) ತಿಳಿಸಿವೆ.
ಮೈಸೂರಿನ ಚಾಮುಂಡಿ ಬೆಟ್ಟದ 12 ನೇ ಶತಮಾನದ ಚಾಮುಂಡೇಶ್ವರಿ ದೇವಸ್ಥಾನದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿದ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಮನವಿಯನ್ನು ಅನುಸರಿಸಿ ಸಿಎಂ ಸಿದ್ದರಾಮಯ್ಯ ಈ ನಿರ್ದೇಶನ ನೀಡಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಭಕ್ತರು ಕೊಡುಗೆಯಾಗಿ ನೀಡಿದ ಮರದ ರಥವು ಕಾಲಕ್ಕನುಗುಣವಾಗಿ ಹದಗೆಟ್ಟಿದೆ ಎಂದು ಗೂಳಿಗೌಡ ಹೇಳಿದ್ದಾರೆ.
”ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥವನ್ನು ಬಳಸಿ ರಥೋತ್ಸವ ಆಯೋಜಿಸುವ ಇಚ್ಛೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಅಂದಾಜು 100 ಕೋಟಿ ರೂ.ನ ಪ್ರಸ್ತಾವನೆಯು ಕೆಲವು ಸಮಯದಿಂದ ಪರಿಗಣನೆಯಲ್ಲಿದೆ’ ಎಂದು ಗೂಳಿಗೌಡ ಹೇಳಿದ್ದಾರೆ.
ಚಿನ್ನದ ರಥದ ಯೋಜನೆ ಸಾಕಾರಗೊಳಿಸಲು ಭಕ್ತರು ಕೊಡುಗೆ ನೀಡಲು ಸಿದ್ಧರಿರುವುದರಿಂದ ಸರಕಾರದ ಆರ್ಥಿಕ ಒಳಗೊಳ್ಳುವಿಕೆ ಅಗತ್ಯವಿದೆ ಎಂದು ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.
2025ರ ದಸರಾ ಮಹೋತ್ಸವಕ್ಕೆ ಚಿನ್ನದ ರಥೋತ್ಸವ ಪೂರ್ಣಗೊಳ್ಳುವ ಗಡುವನ್ನು ಪ್ರಸ್ತಾಪಿಸಿರುವ ಗೂಳಿಗೌಡ, ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಒಳಗೊಂಡ ಭವ್ಯ ಮೆರವಣಿಗೆಗೆ ಸಿದ್ಧವಾಗಬೇಕಿದೆ ಎಂದಿದ್ದರು.