ಬೆಂಗಳೂರು:ನನಗೆ ನನ್ನ ಜವಾಬ್ದಾರಿ ಚೆನ್ನಾಗಿ ಗೊತ್ತಿದೆ. ಬಾಯಿ ಚಪಲಕ್ಕೆ, ಅಗೌರವಕ್ಕೆ ನಾನು ಮಾತನಾಡಿಲ್ಲ. ಯಾವತ್ತೂ ನಾನು ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಒಂದು ವೇಳೆ ಅಂತಹ ಅಪಮಾನ ಮಾಡಿದ್ದಾಗಿದ್ದರೆ ಒಂದು ಕ್ಷಣವೂ ನನ್ನ ಸ್ಥಾನದಲ್ಲಿ ಇರಲ್ಲ. ರಾಜೀನಾಮೆ ನೀಡಲು ಸಿದ್ಧ. ನನ್ನ ಹೇಳಿಕೆ ಬಗ್ಗೆ ತುಂಬಾ ಚರ್ಚೆಯಾಗಿದೆ. ಅದನ್ನು ವಾಪಸ್ ಪಡೆಯಬೇಕಿದ್ದರೆ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟ ಮತ್ತು ಕ್ಷಮೆಯಾಚನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಯಾವುದೇ ಸಭೆ, ಸಮಾರಂಭಗಳಿರಲಿ ಬಾಯಿಗೆ ಬಂದಂತೆ ಮಾಡನಾಡುವುದಿಲ್ಲ. ನನಗೆ ನಾನು ಬಳಸುವ ಕನ್ನಡದ ಪದದ ಅರ್ಥ ಗೊತ್ತಿರುತ್ತದೆ. ಆ ಹೆಣ್ಣು ಮಗಳಿಗೆ ನಾನು ಏನು ಬೈದಿದ್ದೆ..ನೋಡಮ್ಮ ತಾಯಿ ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದು ಆಡುಭಾಷೆಯಲ್ಲಿ ಪ್ರಶ್ನಿಸಿದ್ದೆ. ಅದನ್ನೇ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸಿದರೆ ಹೇಗೆ ಎಂದು ಪರೋಕ್ಷವಾಗಿ ಮಾಧ್ಯಮದವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಆಕೆಯೇ ನನ್ನ ನಾಲಾಯಕ್ ಮುಖ್ಯಮಂತ್ರಿ ಅಂತ ಬೈದಿದ್ದಳು. ನಾನು ತಾಯಿ ಎಂದು ಹೇಳಿದ್ದೆ, ಇದು ತಪ್ಪೇ? ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಾಗಲಿ, ವೈಯಕ್ತಿಕ ಜೀವನದಲ್ಲಾಗಲಿ ಮಹಿಳೆಯರನ್ನು ಅಗೌರವದಿಂದ ಮಾತನಾಡಿಸಿಯೂ ಇಲ್ಲ, ಅವಮಾನಸಿಯೂ ಇಲ್ಲ. ಬೇಕಾದರೆ ಇದರ ಬಗ್ಗೆ ಚರ್ಚೆ ನಡೆಯಲಿ. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ ಎಂದರು. ವಿಷಾಧ ವ್ಯಕ್ತಪಡಿಸುವ ಮಾತನ್ನು ನಾನು ಆಡಿಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.