Advertisement

ಸಮಾಜವಾದದ ಹಿಂದೆ ಬಂಡವಾಳಶಾಹಿತ್ವ; ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳ ಜತೆ ಸಂವಾದದಲ್ಲಿ ಸಿಎಂ

11:37 PM May 31, 2022 | Team Udayavani |

ಬೆಂಗಳೂರು: ಸಮಾಜವಾದದ ಬಗ್ಗೆ ಮಾತನಾಡುವವರೇ ರಾತ್ರಿಯಾಗುತ್ತಿದ್ದಂತೆ ಬಂಡವಾಳಶಾಹಿಗಳ ಜತೆ ಸ್ವಂತದ ಮಾತುಕತೆಗಳನ್ನು ನಡೆಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರಕ್ಕೆ 8 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ಕಲ್ಯಾಣ ಯೋಜನೆಗಳ ಫ‌ಲಾನುಭವಿಗಳೊಂದಿಗೆ ಸಂವಾದ’ದಲ್ಲಿ ಅವರು ಮಾತನಾಡಿದರು.

ಕಳೆದ 70 ವರ್ಷ ಸಮಾಜವಾದದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಆದರೆ, ಸಮಾಜವಾದದ ಬಗ್ಗೆ ಮಾತನಾಡುವವರೇ ರಾತ್ರಿಯಾಗುತ್ತಿದ್ದಂತೆ ಬಂಡವಾಳಶಾಹಿಗಳೊಂದಿಗೆ ಕುಳಿತು ಸ್ವಂತದ ವಿಷಯಗಳ ಬಗ್ಗೆ ಮಾತುಕತೆ ನಡೆಸುತ್ತಾರೆ. ಅತ್ಯಂತ ಸೂಕ್ಷ್ಮವಾಗಿ ಇದನ್ನು ನಾನು ಹೇಳುತ್ತಿದ್ದೇನೆ. ಈ ಬಗ್ಗೆ ಉದಾಹರಣೆಗಳನ್ನೂ ನಾವು ಕಾಣಬಹುದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಮಾಜದ ಕಟ್ಟಡಕಡೆಯ ವ್ಯಕ್ತಿಯನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಆಗುತ್ತಿದೆ. ಹಿಂದೆಂದೂ ಈ ಪ್ರಮಾಣದಲ್ಲಿ ಕೆಲಸ ಆಗಿರಲಿಲ್ಲ ಎಂದರು.

ಅನುದಾನ ತಳಹಂತ ತಲುಪುತ್ತಿದೆ
ಈ ಹಿಂದೆ ದಿಲ್ಲಿಯಿಂದ ಬರುವ ಯೋಜನೆಗಳು ಹಳ್ಳಿ ತಲುಪುತ್ತಲೇ ಇರಲಿಲ್ಲ. ಬೆಂಗಳೂರಿನಂತಹ ರಾಜಧಾನಿ ಅಥವಾ ಅಲ್ಲಲ್ಲೇ ಹೆಪ್ಪುಗಟ್ಟುತ್ತಿದ್ದವು. ಆದರೆ, ಇಂದು ಜೇನುತುಪ್ಪದಂತೆ ಸರಾಗವಾಗಿ ಜನರನ್ನು ತಲುಪುತ್ತಿವೆ. ಇದು ನಿಜವಾದ ಮತ್ತು ಉತ್ತಮ ಆಡಳಿತ ಎಂದು ವಿಶ್ಲೇಷಿಸಿದ ಅವರು, ಯೋಜನೆಗಳನ್ನು ತಳದಿಂದ ಮೇಲಕ್ಕೆ ರೂಪಿಸಬೇಕು. ಇದಕ್ಕೆ ಪೂರಕವಾಗಿ ಅವುಗಳ ಅನುಷ್ಠಾನಕ್ಕೆ ಮೇಲಿನಿಂದ ಕೆಳಹಂತದವರೆಗೆ ಹಣಕಾಸಿನ ನೆರವು ಹರಿದುಬರಬೇಕು. ಈ ಹಿಂದೆ ಯೋಜನೆಗಳನ್ನು ರೂಪಿಸಿದರೂ, ಅನುದಾನ ತಳಹಂತದವರೆಗೆ ತಲುಪುತ್ತಿರಲಿಲ್ಲ. ಈಗ ನೇರವಾಗಿ ಫ‌ಲಾನುಭವಿಗಳ ಖಾತೆಗೆ ಅದು ಹೋಗುತ್ತಿದೆ ಎಂದು ಹೇಳಿದರು.

18 ಲಕ್ಷ ಮನೆ ನಿರ್ಮಾಣ
2024ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ಒದಗಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಈ ಯೋಜನೆ ಅಡಿ ಮುಂದಿನ ಮೂರು ವರ್ಷಗಳಲ್ಲಿ 18 ಲಕ್ಷ ಮನೆಗಳನ್ನು ನಿರ್ಮಿಸಲು ಅವಕಾಶ ನೀಡಿ, ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

Advertisement

ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್‌, ಶಶಿಕಲಾ ಜೊಲ್ಲೆ, ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಸಂಸದ ಪಿ.ಸಿ. ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next