Advertisement

ಮಹದಾಯಿ ವಿವಾದ, ನೆರೆ ಪರಿಹಾರ ಹೆಚ್ಚುವರಿ ಅನುದಾನಕ್ಕೆ ಕೇಂದ್ರಕ್ಕೆ ಜಂಟಿ ಮನವಿ

10:17 AM Sep 04, 2019 | Team Udayavani |

ಮುಂಬಯಿ: ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಎರಡೂ ರಾಜ್ಯಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದರು.

Advertisement

ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಮಾತುಕತೆಯ ಸಂದರ್ಭದಲ್ಲಿ ಮಹದಾಯಿ, ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಗಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರಕ್ಕೆ ಜಂಟಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಗಜೆಟ್ ಅಧಿಸೂಚನೆ ಇನ್ನೂ ಹೊರಡಿಸದೇ ಇರುವುದರಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಿ ಶೀಘ್ರದಲ್ಲೇ ಗಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು. ಈ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ಜಂಟಿಯಾಗಿ ಅಫಿದವಿತ್ ಸಲ್ಲಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಮ್ಮತಿಸಿದರು.


ಇನ್ನು, ಪ್ರತೀಬಾರಿ ಮಳೆಗಾಲದ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದ ನೀರು ಬಿಡುಗಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವುದನ್ನು ತಪ್ಪಿಸಲು ಮುಂಗಾರು ಪ್ರಾರಂಭವಾದ ಕೂಡಲೇ ಜಲಾಶಯದಿಂದ ಹಂತಹಂತವಾಗಿ ನೀರು ಬಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಯಿತು.

ಮುಂಬಯಿ ಬೆಂಗಳೂರು ಕೈಗಾರಿಕಾ ಕಾರಿಡಾರ್ ರಚನೆಗೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದೆ ಹಾಗಾಗಿ ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ಉಭಯ ಸರಕಾರಗಳ ವತಿಯಿಂದ ಕೇಂದ್ರಕ್ಕೆ ಜಂಟಿ ಮನವಿ ಸಲ್ಲಿಸಲು ಬಿ,ಎಸ್.ವೈ ಮತ್ತು ಫಡ್ನವೀಸ್ ಸಮ್ಮತಿಸಿದರು.

ಈ ಬಾರಿ ಎರಡೂ ರಾಜ್ಯಗಳ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡ ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಹಾಗೂ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಎರಡೂ ರಾಜ್ಯಗಳಿಂದ ಜಂಟಿ ಮನವಿ ಸಲ್ಲಿಸುವ ತೀರ್ಮಾನಕ್ಕೆ ಬರಲಾಯಿತು.

ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗೂ ಇಂಧನ ಸಚಿವರಾದ ಚಂದ್ರಶೇಖರ್ ಕಿಶನ್ ರಾವ್ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next