Advertisement

ಕರ್ನಾಟಕವನ್ನು ಗುಜರಾತ್‌ ಮಾಡಲು ಅಸಾಧ್ಯ: ಸಚಿವ ಯು.ಟಿ. ಖಾದರ್‌

11:10 AM Oct 05, 2017 | |

ಮಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡುವುದಕ್ಕೂ ಮೊದಲು, ಕೇಂದ್ರದಲ್ಲಿ ಬಿಜೆಪಿ ಸರಕಾರ ನೀಡಿದ್ದ ಆಶ್ವಾಸನೆಗಳಲ್ಲಿ ಯಾವುದನ್ನು ಈಡೇರಿಸಿದೆ ಎಂಬುದನ್ನು ಜನತೆಗೆ ಹೇಳಬೇಕು. ಚುನಾವಣೆ ಬರುವಾಗ ಜನರಿಗೆ ಬಣ್ಣ ಬಣ್ಣದ ಭರವಸೆ ನೀಡಿ ದಿಕ್ಕುತಪ್ಪಿಸುವುದು ಬೇಡ. ಇಂತಹ ಮಾತಿಂದ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಗುಜರಾತ್‌ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್‌ ಹೇಳಿದರು. 

Advertisement

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರ ಪಡೆಯುವ ಮೊದಲು ಕಪ್ಪು ಹಣ ತರುತ್ತೇವೆ ಎಂದವರು ಈಗ ಏನಾಯಿತು? ಪಾಕಿಸ್ಥಾನಕ್ಕೆ ಉತ್ತರ ನೀಡಲಿದ್ದೇವೆ ಎಂದವರು ಏನು ಮಾಡಿದರು? ಪೆಟ್ರೋಲ್‌, ಡೀಸೆಲ್‌ ದರ ಕಡಿಮೆ ಮಾಡುತ್ತೇವೆ ಅಂದವರು ಈಗ ಮಾಡಿದ್ದೇನು? ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು ಎಷ್ಟು ಉದ್ಯೋಗ ಕೊಟ್ಟರು? ಇಂತಹ ನೂರಾರು ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಲಿ ಎಂದವರು ಆಗ್ರಹಿಸಿದ್ದಾರೆ. 

ಲೂಟಿ ಮಾಡಿ ಜೈಲು ಪಾಲಾಗಿದ್ದು ಯಾರು?
ಮಾತುಗಳನ್ನಷ್ಟೇ ಆಡುವ ಪ್ರಧಾನಿಯವರ ಮನ್‌ಕಿ
ಬಾತ್‌ಗೆ ಪ್ರತಿಯಾಗಿ, ಆಗಿರುವ ಕೆಲಸಗಳ ಬಗ್ಗೆ ಸಿದ್ದರಾಮಯ್ಯನವರ “ಕಾಮ್‌ ಕಿ ಬಾತ್‌’ ನಡೆಸಲು ಉದ್ದೇಶಿಸಿರುವುದನ್ನು ಸಂಸದೆ ಶೋಭಾ ಟೀಕಿಸಿರುವುದು ಖಂಡನೀಯ. ಹಿಂದಿನ ಸರಕಾರವಿದ್ದಾಗ ಶೋಭಾ ಮತ್ತು ಬಿಜೆಪಿಯವರು ಲೂಟಿ ಮಾಡಿದ್ದು, ಯಾರು ಜೈಲಿಗೆ ಹೋಗಿ
ದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಕಾಂಗ್ರೆಸ್‌ ಮುಖಂಡ ಕಣಚೂರು ಮೋನು ಮುಂತಾದವರಿದ್ದರು.

ರಾಜೀವ್‌ ಭದ್ರತೆ ಬಿಜೆಪಿ ಹಿಂದೆಗೆದಿತ್ತು! 
ಪತ್ರಿಕಾಗೋಷ್ಠಿಯಲ್ಲಿ  ಖಾದರ್‌ ಅವರು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗಿದ್ದ ಝಡ್‌ ಕೆಟಗರಿ ಭದ್ರತೆಯನ್ನು ಹಿಂದೆಗೆದಿದ್ದು ಬಿಜೆಪಿ ಎಂದು ಆರೋಪಿಸಿ ಅಚ್ಚರಿಗೆ ಕಾರಣರಾದರು. ರಾಜೀವ್‌ ಗಾಂಧಿಯವರ ಭದ್ರತೆ ಹಿಂಪಡೆದ ಬಳಿಕವೇ ಶ್ರೀ ಪೆರಂಬದೂರಿನಲ್ಲಿ ಅವರ ಹತ್ಯೆಯಾಗಿದೆ, ಅದಕ್ಕೆ ಬಿಜೆಪಿ ಕಾರಣ ಎಂದು ಕೂಡ ನಾನು ಹೇಳುತ್ತಿಲ್ಲ. ಆದರೆ ಅವರ ಮನಃಸ್ಥಿತಿಯನ್ನಷ್ಟೇ ಪ್ರಶ್ನಿಸುತ್ತೇನೆ. ಈಗ ಅಮಿತ್‌ ಶಾ ಅವರಿಗೆ ಯಾವುದೇ ಸಚಿವ ಸ್ಥಾನ ಇಲ್ಲದಿದ್ದರೂ ಭಾರೀ ಭದ್ರತೆ ನೀಡುತ್ತಿರುವುದು ಬಿಜೆಪಿಯವರ ಯೂಟರ್ನ್ ವರ್ತನೆಗೆ ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next