ಬೆಂಗಳೂರು: ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಜ.20ರಿಂದ 24ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳುವ ಬಗ್ಗೆ ಶನಿವಾರ ಅಂತಿಮವಾಗಲಿದ್ದು, ಅದರ ಮೇಲೆ ಸಂಪುಟ ವಿಸ್ತರಣೆ ಪ್ರಕ್ರಿಯೆ ನಿರ್ಧಾರವಾಗಲಿದೆ.
ಸಂಕ್ರಾಂತಿ ಹಬ್ಬದ ರಾತ್ರಿ ಇಲ್ಲವೇ ಜ.16ಕ್ಕೆ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಚಿಂತನೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಒಂದೊಮ್ಮೆ ವರಿಷ್ಠರನ್ನು ಭೇಟಿಯಾಗಿ ಒಪ್ಪಿಗೆ ಪಡೆದರೆ ಜ.17 ಇಲ್ಲವೇ 18ರಂದು ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ. ಜ.19ರಂದು ದಾವೋಸ್ ಪ್ರವಾಸ
ಕೈಗೊಂಡರೆ ಜ.23ರ ಬಳಿಕ ಖಾತೆ ಹಂಚಿಕೆಯಾಗುವ ಸಂಭವವಿದೆ ಎಂದು ಮೂಲಗಳು ಹೇಳಿವೆ.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆದರೆ ಸಚಿವ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುವ ಸಾಧ್ಯತೆ ಇದೆ. ಹಾಗಾಗಿ, ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಗಿಸಿ ವಿದೇಶ ಪ್ರವಾಸ ಕೈಗೊಂಡರೆ ಸ್ಥಾನ ವಂಚಿತರ ಅಸಮಾಧಾನವೂ ತಕ್ಕ ಮಟ್ಟಿಗೆ ಶಮನವಾದಂತಾಗಲಿದೆ. ವಿದೇಶ ಪ್ರವಾಸದಿಂದ ಹಿಂತಿರುಗಿದ ಬಳಿಕ ಎಲ್ಲರನ್ನೂ ಸಮಾಧಾನಪಡಿಸಿ ಖಾತೆ ಹಂಚಿಕೆ ಪ್ರಕ್ರಿಯೆ ಸುಗಮಗೊಳಿಸಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನವಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಖ್ಯಾತಿ ಪಡೆದಿದ್ದು, ರಾಜ್ಯವನ್ನು ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಪ್ರತಿನಿಧಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಆದರೆ, ವಿದೇಶ ಪ್ರವಾಸಕ್ಕೆ ಯಡಿಯೂರಪ್ಪ ಅವರು ಹೆಚ್ಚಿನ ಆಸಕ್ತಿ ತೋರಿಲ್ಲ. ದಾವೋಸ್ ಪ್ರವಾಸ ಕೈಗೊಳ್ಳುವ ಬಗ್ಗೆ ಶನಿವಾರ ನಿರ್ಧಾರ ಅಂತಿಮವಾಗಲಿದೆ. ಮುಖ್ಯಮಂತ್ರಿಗಳ ನಿಲುವಿನ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ ಎನ್ನಲಾಗಿದೆ.
ಮುಖ್ಯಮಂತ್ರಿಗಳು ದಾವೋಸ್ ಪ್ರವಾಸ ಕೈಗೊಳ್ಳುವುದು ಖಚಿತವಾದರೆ ಜ.19ರಿಂದ 23ರವರೆಗೆ ಮಾತ್ರ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲೇ ವರಿಷ್ಠರ ಭೇಟಿಗೆ ಅವಕಾಶ ಸಿಗುವುದೇ ಎಂಬುದರ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ. ಜ.18ರಂದು ಕೇಂದ್ರ ಗೃಹ ಸಚಿವರಾದ
ಅಮಿತ್ ಶಾ ಅವರು ಹುಬ್ಬಳ್ಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದಕ್ಕೂ ಮೊದಲೇ ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿ ಒಪ್ಪಿಗೆ ಪಡೆಯಬೇಕಿದೆ. ಫೆ.17ರಿಂದ 21ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲು ಸಚಿವರಾಗಬೇಕು ಎಂಬುದು ನೂತನ ಶಾಸಕರ ಆಗ್ರಹ. ಹಾಗಾಗಿ, ವರಿಷ್ಠರ ಒಪ್ಪಿಗೆ, ಯಡಿಯೂರಪ್ಪ ಅವರ ನಿಲುವಿನ ಮೇಲೆ ಸಂಪುಟ ವಿಸ್ತರಣೆ ನಿರ್ಧಾರವಾಗಲಿದೆ.