Advertisement

ಉಪ ಕದನ; ಬಹಿರಂಗ ಪ್ರಚಾರಕ್ಕೆ ತೆರೆ

06:39 PM Apr 16, 2021 | Team Udayavani |

ಬೀದರ: ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ಪ್ರಭಾವಿ ನಾಯಕರ ವಾಗ್ಯುದ್ಧಗಳಿಗೆ ಸಾಕ್ಷಿಯಾದ ಬಸವಕಲ್ಯಾಣ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕೊನೆ ದಿನವಾದ ಗುರುವಾರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬಿರು ಬಿಸಿಲನ್ನೂ ಲೆಕ್ಕಿಸದೇ ಅಬ್ಬರದ ಪ್ರಚಾರ ಕೈಗೊಂಡರು. ಶುಕ್ರವಾರ ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ ಕಸರತ್ತು ನಡೆಯಲಿದೆ.

Advertisement

ಚುನಾವಣೆ ಪ್ರಚಾರ ಕಾರ್ಯ ಮತದಾನ ಆರಂಭವಾಗುವ 48 ಗಂಟೆ ಮುಂಚಿತವಾಗಿಯೇ ಮುಗಿಯಬೇಕು. ಹೀಗಾಗಿ ಗುರುವಾರ ರಾಜಕೀಯ ಪಕ್ಷಗಳು ತಮ್ಮ ಚುನಾವಣೆ ಪ್ರಚಾರ ಚುರುಕುಗೊಳಿಸಿ, ಕೊನೆಯ ಕ್ಷಣದಲ್ಲಿ ಮತದಾರನ ಮನವೊಲಿಸಲು ಭಾರಿ ಪೈಪೋಟಿ ನಡೆಸಿದರು. ಕೊನೆ ಸುತ್ತಿನ ಪ್ರಚಾರದ ಭರಾಟೆ ಹಿನ್ನೆಲೆ ಅಭ್ಯರ್ಥಿಗಳ ಎದೆಬಡಿತ ಜೋರಾಗಿಯೇ ಇತ್ತು.

ಶಾಸಕ ದಿ. ನಾರಾಯಣರಾವ್‌ ನಿಧನದಿಂದ ತೆರವಾಗಿರುವ ಬಸವಣ್ಣ ಕಾರ್ಯದಲ್ಲಿ ಹಿಡಿತ ಸಾಧಿಸಲು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪ್ರತಿಷ್ಠೆಯಾಗಿ ಪಡೆದಿದ್ದರಿಂದ ಬಸವಕಲ್ಯಾಣ ಉಪ ಸಮರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಉಪ ಕದನ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವರಿಂದ ಹಿಡಿದು ಶಾಸಕರವರೆಗೆ, ಕೇಂದ್ರದ ವರಿಷ್ಠರಿಂದ ಜಿಲ್ಲಾಧ್ಯಕ್ಷರುಗಳವರೆಗೆ ತಮ್ಮ ಪಕ್ಷದ ಉಮೇದುವಾರರ ಪರ ಭರ್ಜರಿಯಾಗಿ ಮತಯಾಚಿಸಿದರು.

ಪ್ರಚಾರಕ್ಕಿಳಿದಿದ್ದ ಪ್ರಮುಖ ನಾಯಕರು: ಬಿಜೆಪಿ ಪರ ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್‌, ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌, ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಆರ್‌. ಅಶೋಕ, ಬಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಆನಂದಸಿಂಗ್‌, ಪ್ರಭು ಚವ್ಹಾಣ ಮತ್ತು ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲಾ ಪ್ರಮುಖರು ಪ್ರಚಾರ ನಡೆಸಿದರು.

ಕಾಂಗ್ರೆಸ್‌ನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಣದೀಪಸಿಂಗ್‌ ಸುಜೇìವಾಲಾ, ಕೇಂದ್ರ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಹಾರಾಷ್ಟ್ರದ ಸಚಿವ ಅಮಿತ್‌ ದೇಶಮುಖ, ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ, ರಾಮಲಿಂಗಾ ರೆಡ್ಡಿ, ಎಚ್‌.ಎಂ. ರೇವಣ್ಣ, ಜಮೀರ್‌ ಅಹ್ಮದ್‌, ಯು.ಟಿ. ಖಾದರ್‌, ಶರಣಪ್ರಕಾಶ ಪಾಟೀಲ, ಪ್ರಿಯಾಂಕ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಅಜಯಸಿಂಗ್‌, ರಾಜಶೇಖರ ಪಾಟೀಲ, ರಹೀಮ್‌ ಖಾನ್‌, ಬಿ.ಆರ್‌. ಪಾಟೀಲ ಇತರರು ಪ್ರಚಾರದಲ್ಲಿ ಭಾಗವಹಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು.

Advertisement

ಮನೆ-ಮನೆ ಭೇಟಿ ಪ್ರಚಾರಕ್ಕೆ ಅವಕಾಶ: ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ, ವೆಂಕಟರಾವ್‌ ನಾಡಗೌಡ ಮತ್ತಿತರರು ಬಹಿರಂಗ ಪ್ರಚಾರ ನಡೆಸಿದರು. ಇದರೊಟ್ಟಿಗೆ ಬಸವಕಲ್ಯಾಣ ಸ್ವಾಭಿಮಾನ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸಹ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಮಾಡಿದರು. ಚುನಾವಣೆಗೆ ಗುರುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದರೂ, ಮನೆ-ಮನೆಗೆ ತೆರಳಿ ಮತಯಾಚಿಸಲು ಅವಕಾಶ ಇದೆ. ಮತದಾನ ಏ.17ರಂದು ನಡೆಯಲಿದ್ದು, ಕ್ಷೇತ್ರದ ವೆಚ್ಚ ವೀಕ್ಷಕರು ಅಭ್ಯರ್ಥಿಗಳ ಮೇಲೆ ನಿಗಾ ಇಟ್ಟಿದ್ದಾರೆ.

ಸಾಧನೆ-ವೈಫಲ್ಯ ಮುಂದಿಟ್ಟು ಮತ ಬೇಟೆ
ಆಡಳಿತಾರೂಢ ಬಿಜೆಪಿ ಪಕ್ಷದವರು ರಾಜ್ಯ-ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತಯಾಚನೆ ಮಾಡಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಉಭಯ ಸರ್ಕಾರದ ವೈಫಲ್ಯ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷಕ್ಕೆ ಬೆಂಬಲಿಸುವಂತೆ ಮತಯಾಚಿಸಿದರು. ಮುಖ್ಯವಾಗಿ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮಂಟಪ ನಿರ್ಮಾಣ, ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗಾಗಿ ಬಿಕೆಡಿಬಿಗೆ ಅನುದಾನ ಮತ್ತು ನೀರಾವರಿ ಯೋಜನೆ ವಿಷಯಗಳು ಚುನಾವಣೆ ಪ್ರಚಾರದ ವಿಷಯಗಳಾಗಿದ್ದವು. ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತದಾರರು ತಮಗೆ ಗೆಲ್ಲಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next