Advertisement

Karnataka Budget: ದಕ್ಷಿಣ ಕನ್ನಡದಲ್ಲಿ ಮೊದಲ ಜಲಮೆಟ್ರೋ, ಕರಾವಳಿಗೆ ಸಿಕ್ಕಿದ್ದೇನು?

05:59 PM Feb 16, 2024 | Team Udayavani |

ಮಂಗಳೂರು/ಉಡುಪಿ: ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪಿಸುವುದಾಗಿ ರಾಜ್ಯ ಬಜೆಟ್‌ ನಲ್ಲಿ ಘೋಷಿಸಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲೆಗೂ ಆದ್ಯತೆ ನೀಡಲಾಗಿದೆ.

Advertisement

ಇದನ್ನೂ ಓದಿ:Karnataka Budget: ಲೋಕೋಪಯೋಗಿ ಇಲಾಖೆ- 30 ಲಕ್ಷ ಉದ್ಯೋಗ ಸೃಷ್ಠಿ, ಇ ಆಫೀಸ್‌ ಪ್ರಾರಂಭ

ಉಡುಪಿ (ಕಾರ್ಕಳದ ಎಣ್ಣೆಹೊಳೆ, ಸಿದ್ದಾಪುರ) ಜಿಲ್ಲೆಯ ಸ್ವರ್ಣ ಏತ ನೀರಾವರಿ ಯೋಜನೆಯ ಪುನಶ್ಚೇತನ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ ನಲ್ಲಿ ಘೋಷಿಸಲಾಗಿದೆ.

ಉಡುಪಿಯಲ್ಲಿ ವಿಜ್ಞಾನ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಉಡುಪಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಮಾಡಲಾಗುವುದು.

ತುಳು, ಬ್ಯಾರಿ ಮತ್ತು ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು, ಅವುಗಳ ಅಭಿವೃದ್ಧಿಗೆ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸುವುದಾಗಿ ಬಜೆಟ್‌ ನಲ್ಲಿ ಘೋಷಿಸಲಾಗಿದೆ.

Advertisement

ಕರಾವಳಿಯ ಕಡಲ ತೀರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ ಅಭಿವೃದ್ದಿಪಡಿಸಲಾಗುವುದು.

ಮಂಗಳೂರು ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ.  ಮಂಗಳೂರಿನ ಹಜ್‌ ಭವನದ ನಿರ್ಮಾಣ ಕಾರ್ಯವನ್ನು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಯೋಜನೆ ಜಾರಿ. 2024-25ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಮಂಗಳೂರು ಕಚೇರಿಯಲ್ಲಿ ಈ ಯೋಜನೆ ಜಾರಿ.

ಪುತ್ತೂರು ಪಶುವೈದ್ಯಕೀಯ ಕಾಲೇಜಿನ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಕಾಲೇಜನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ ನಲ್ಲಿ ತಿಳಿಸಿದ್ದಾರೆ.

ಮಂಗಳೂರು ಸಮೀಪ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ. ಮಂಗಳೂರು ಬಂದರಿನಿಂದ ಬೆಂಗಳೂರುವರೆಗೆ ಆರ್ಥಿಕ ಕಾರಿಡಾರ್‌ ಅಭಿವೃದ್ಧಿಗೆ ಒತ್ತು. ಮಲ್ಪೆ ಮತ್ತು ಹಳೇ ಮಂಗಳೂರು ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನಾಲ್ಕು ಬರ್ತ್‌ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ ಎಂದು ಬಜೆಟ್‌ ನಲ್ಲಿ ಘೋಷಿಸಲಾಗಿದೆ.

ಹಳೇ ಮಂಗಳೂರು ಬಂದರಿನಲ್ಲಿ 350 ಮೀ ಉದ್ಧದ ಕೋಸ್ಟಲ್‌ ಬರ್ತ್‌ ನಿರ್ಮಾಣ ಕಾಮಗಾರಿಯನ್ನು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ ನಲ್ಲಿ ತಿಳಿಸಲಾಗಿದೆ.

ಹಳೆ ಮಂಗಳೂರು ಮತ್ತು ಹಂಗಾರಕಟ್ಟೆ ಬಂದರುಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆ ಪ್ರಾರಂಭ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೂಸ್‌ ಮತ್ತು ಪ್ರವಾಸೋದ್ಯಮ ಬಂದರು (ICTP) ಅಭಿವೃದ್ಧಿಪಡಿಸಲು ಐಐಟಿ ಮದ್ರಾಸ್‌ ಸಹಯೋಗದೊಂದಿಗೆ ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು ಎಂದು ಬಜೆಟ್‌ ನಲ್ಲಿ ತಿಳಿಸಲಾಗಿದೆ. ದ್ವೀಪಗಳ ಸಮಗ್ರ ಅಭಿವೃದ್ಧಿಗೆ ರೂಪರೇಷೆ.

ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಜಲ ಮೆಟ್ರೋ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ್ದ 15ನೇ ಮುಂಗಡ ಪತ್ರದಲ್ಲಿ ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಜಲ ಮೆಟ್ರೋ ಸೇವೆ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next