Advertisement

Budget: ಮಹಿಳೆಯರಿಗೆ ಶಕ್ತಿ ತುಂಬಲು: ‘ಉದ್ಯಮ ಶಕ್ತಿ’ ಯೋಜನೆಯಡಿ 100 ಪೆಟ್ರೋಲ್ ಬಂಕ್

04:00 PM Jul 07, 2023 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಕಂದಾಯ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವ ಉದ್ದೇಶದಿಂದ ಕೆಲ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಬನ್ನಿ ಹಾಗಾದರೆ ಸಿಎಂ ಮಂಡಿಸಿದ ಬಜೆಟ್ ನಲ್ಲಿ ಕಂದಾಯ ಇಲಾಖೆಗೆ ಯಾವ ಯಾವ ಹೊಸ ಯೋಜನೆಗಳನ್ನು ತಂದಿದ್ದಾರೆ ಎಂಬ ವಿವರ ಇಲ್ಲಿದೆ.

Advertisement

1. ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆ ಎಂದೇ ಜನಜನಿತವಾಗಿದೆ. ಜನಸಾಮಾನ್ಯರು ದೈನಂದಿನ ಬದುಕಿನಲ್ಲಿ ಕಂದಾಯ ಇಲಾಖೆಯಿಂದ ಒಂದಲ್ಲ ಒಂದು ಸೇವೆ ಪಡೆಯುತ್ತಲೇ ಇರುತ್ತಾರೆ. ಇಲಾಖೆಯ ಸ್ಪಂದನಾಶೀಲತೆಯು ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಜನರು ಹಲವಾರು ಸವಾಲುಗಳನ್ನು, ಅಡಚಣೆಗಳನ್ನು ಎದುರಿಸುತ್ತಿದ್ದು, ತಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಧ್ಯವರ್ತಿಗಳ ಸಹಾಯವನ್ನು ಪಡೆಯುವ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ನಮ್ಮ ಸರ್ಕಾರವು ರಾಜ್ಯದ ಜನತೆಗೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಲು ಮತ್ತು ಇಲಾಖೆಯನ್ನು ಮತ್ತಷ್ಟು ಜವಾಬ್ದಾರಿಯಿಂದ ನಡೆಸಲು ಕಟಿಬದ್ಧವಾಗಿದೆ. ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಸರಳವಾಗಿ, ನೇರವಾಗಿ ಮತ್ತು ಸಕಾಲದಲ್ಲಿ ಜನರಿಗೆ ತಲುಪಿಸಲು ಕ್ರಮ ವಹಿಸಲಾಗುವುದು.

2. ಕರ್ನಾಟಕ ಭೂ-ಕಂದಾಯ ಕಾಯಿದೆಯ ಸೆಕ್ಷನ್‌ 95ಕ್ಕೆ ತಿದ್ದುಪಡಿ ತಂದು ಜಮೀನನ್ನು ಸ್ವಯಂ ಘೋಷಣೆಯ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು.

3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನನ್ನು ಪುನರ್‌ ಸ್ಥಾಪಿಸುವುದಕ್ಕಾಗಿ ಮನವಿ ಸಲ್ಲಿಸಲು ಕಾಲಮಿತಿಯನ್ನು ಕಾಯ್ದೆಯಲ್ಲಿಯೇ ನಿಗದಿಪಡಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ (PTCL), 1978ಕ್ಕೆ ಸೂಕ್ತ ತಿದ್ದುಪಡಿ ತರಲಾಗುವುದು.

4. ಜಿಲ್ಲಾ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಜಿಲ್ಲಾಡಳಿತ ಕಛೇರಿ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ, ರಾಯಚೂರು, ಉತ್ತರ ಕನ್ನಡ, ಚಿತ್ರದುರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

Advertisement

5. ಜೊತೆಗೆ, ತಾಲ್ಲೂಕು ಮಟ್ಟದ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ತಾಲ್ಲೂಕು ಆಡಳಿತ ಸೌಧಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಗತಿಯಲ್ಲಿರುವ 25 ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

6. ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ʻಉದ್ಯಮ ಶಕ್ತಿʼ ಎಂಬ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್‌ ಬಂಕ್‌ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ವಹಿಸಲಿದೆ. ಪೆಟ್ರೋಲಿಯಂ ಕಂಪನಿಗಳು ಇದರ ನಿರ್ಮಾಣಕ್ಕೆ ಬಂಡವಾಳ ಹೂಡಲಿವೆ. ರಾಜ್ಯ ಸರ್ಕಾರವು ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಭೂಮಿ ಒದಗಿಸುವುದರೊಂದಿಗೆ ತರಬೇತಿ, ಪರವಾನಗಿ, ಮತ್ತಿತರ ಬೆಂಬಲ ನೀಡಲಿದೆ.

7. ಹವಾಮಾನ ವೈಪರೀತ್ಯಗಳಾದ ಪ್ರವಾಹ, ಅನಾವೃಷ್ಟಿ, ನದಿ ತೀರದ ಸವೆತದಿಂದ ಉಂಟಾಗುವ ಪರಿಣಾಮಗಳನ್ನು ಪರಿಹರಿಸಲು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಪ್ರಸಕ್ತ ಸಾಲಿನಲ್ಲಿ 422 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ.

8. ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿಯಲ್ಲಿ (NDMF) ನಿರ್ದಿಷ್ಟ ವಿಪತ್ತು ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರವಾಹ ನಿಯಂತ್ರಣ ಹಾಗೂ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ಭೂಕುಸಿತದ ಅಪಾಯ ತಗ್ಗಿಸುವಿಕೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಬಲವರ್ಧನೆ ಮುಂತಾದ ವಿಪತ್ತು ಪರಿಹಾರ ಕಾರ್ಯಕ್ರಮಗಳನ್ನು ಒಟ್ಟು 721 ಕೋಟಿ ರೂ.ಗಳ ವೆಚ್ಚದಲ್ಲಿ ತೆಗೆದುಕೊಳ್ಳಲು ಉದ್ದೇಶಿಸಿದೆ.

9. ಬೆಳೆಹಾನಿ ಪರಿಹಾರ ದರದಲ್ಲಿ ವಿಮಾ ಯೋಜನೆ ಮೊತ್ತವನ್ನು ಸಂಯೋಜಿಸಿರುವುದನ್ನು ಕೈಬಿಡುವಂತೆ ಹಾಗೂ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ನಿಗದಿಪಡಿಸಿರುವ ಬೆಳೆಹಾನಿ ಪರಿಹಾರ ದರಗಳಂತೆ ಕೇಂದ್ರ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು.

10. ರಾಜ್ಯದಲ್ಲಿ ಭಾರೀ ಮಳೆ, ಬಲವಾದ ಗಾಳಿ, ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು Doppler Weather Radar ಕಣ್ಗಾವಲು ಯಂತ್ರವನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.

11. ನೋಂದಣಿಯೇತರ ದಸ್ತಾವೇಜುಗಳಾದ ಒಪ್ಪಂದಗಳು, ಬ್ಯಾಂಕ್‌ ಗ್ಯಾರಂಟಿಗಳು, ಷೇರು ಪ್ರಮಾಣ ಪತ್ರಗಳು ಹಾಗೂ ಬ್ಯಾಂಕಿಂಗ್‌ ದಾಖಲೆಗಳು ಮುಂತಾದ ವಹಿವಾಟುಗಳಿಗೆ ಇ-ಮುದ್ರಾಂಕ ಮತ್ತು ಡಿಜಿಟಲ್‌ ಸ್ಟಾಂಪಿಂಗ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದರ ಮೂಲಕ ಮುದ್ರಾಂಕ ರಾಜಸ್ವದಲ್ಲಿ ಪಾರದರ್ಶಕತೆ ಹಾಗೂ ನಿಖರತೆ ತರಲಾಗುವುದು.

12. ಈವರೆಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

13. ಬೆಂಗಳೂರಿನಲ್ಲಿರುವ ಉಪ-ನೋಂದಣಾಧಿಕಾರಿ ಕಛೇರಿಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ಕಡಿಮೆ ಮಾಡಲು ಬೆಂಗಳೂರಿನ ಎಂಟು ಕಛೇರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಕಛೇರಿಗಳನ್ನಾಗಿ ಉನ್ನತೀಕರಿಸಲಾಗುವುದು.

ಇದನ್ನೂ ಓದಿ: Budget: ಕ್ರೀಡಾಪಟುಗಳಿಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಹುದ್ದೆ

Advertisement

Udayavani is now on Telegram. Click here to join our channel and stay updated with the latest news.

Next