Advertisement
ಮತಬ್ಯಾಂಕ್ ಕೇಂದ್ರವಾಗಿಟ್ಟುಕೊಂಡೇ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಬಡವರು, ದಲಿತರು ಹಾಗೂ ಅಸಂಘಟಿತ ವಲಯದ ಕಾರ್ಮಿಕರನ್ನು ಸೆಳೆಯುವ ಯೋಜನೆಗಳ ಮೂಲಕ ಸರ್ವರನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾರೆ. ಒಂದು ಕಡೆ ಜನಪ್ರಿಯತೆ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಮತ್ತೊಂದೆಡೆ ಶಿಕ್ಷಣ, ಆರೋಗ್ಯ, ನೀರಾವರಿಗೂ ಆದ್ಯತೆ ನೀಡಿ ನಮ್ಮದು ಅಭಿವೃದ್ಧಿಪರ ಸರಕಾರವೆಂದು ಬಿಂಬಿಸಿಕೊಳ್ಳಲು ಹೊರಟಂತಿದೆ.
ಎಲ್ಲರನ್ನೂ ಮೆಚ್ಚಿಸುವ ಹಾಗೂ ಎಲ್ಲರ ಮೆಚ್ಚುಗೆಗೂ ಪಾತ್ರರಾಗುವ ಪ್ರಯತ್ನದಲ್ಲಿ ಅಭಿವೃದ್ಧಿ ಕೆಲಸಗಳು ಹಾಗೂ ಘೋಷಿಸಿರುವ ಹೊಸ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳ್ಳುತ್ತವೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಭರವಸೆಗಳ ಬುತ್ತಿ ಬಡಿಸಲು ಹೊರಟಿರುವ ಬೊಮ್ಮಾಯಿ ಅವರ “ಮೆನು ಕಾರ್ಡ್’ ಚೆನ್ನಾಗಿದೆ, ಊಟಕ್ಕೆ ಕುಳಿತವರ ಮುಂದೆ ದೊಡ್ಡ ಎಲೆಯಂತು ಹಾಕಲಾಗಿದೆ. ಆದರೆ ಎಷ್ಟರ ಮಟ್ಟಿಗೆ ಅಡುಗೆ ತಯಾರಿಸಿ ಬಡಿಸಲು ಸಾಧ್ಯ ಎಂಬುದು ಮಾತ್ರ ಯಕ್ಷಪ್ರಶ್ನೆ. ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳ ಜಾರಿಗೆ ಸಂಪನ್ಮೂಲ ಕೊರತೆಯನ್ನು ಅಂಕಿಅಂಶಗಳ ಆಟದಲ್ಲಿ ಮರೆಮಾಚುವ ಪ್ರಯತ್ನ ನಡೆಸಿ, ಪರಿಣಿತ ಅರ್ಥಶಾಸ್ತ್ರಜ್ಞತೆಯನ್ನು ಪ್ರದರ್ಶಿಸಿದ್ದಾರೆ.
Related Articles
ಬಿಜೆಪಿ ಸರ್ಕಾರ ತನ್ನ ಹಿಂದುತ್ವದ ಲೇಪವನ್ನು ಬಜೆಟ್‌ಗೂ ಅಂಟಿಸುವ ಮೂಲಕ ಎದುರಾಳಿಗಳ ಬಾಯಿ ಮುಚ್ಚಿಸಲು ಹೊರಟಿದೆ. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾವನೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ತ್ರಿಕೋನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ದೇವಾಲಯಗಳು ಹಾಗೂ ಮಠಗಳ ಪುನರುಜ್ಜೀವನಕ್ಕೆ ಒಂದು ಸಾವಿರ ಕೋಟಿ ರೂ. ಮೀಸಲಿರುವುದು ಜಾತ್ಯತೀತವಾದಿಗಳ ಕಣ್ಣು ಕೆಂಪಾಗಿಸಿದೆ. ಇದನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡು ವಿರೋಧಿಗಳ ಬಾಯಿ ಮುಚ್ಚಿಸುವುದು ಇಲ್ಲವೇ ಸಂದಿಗ್ಧಕ್ಕೆ ಸಿಲುಕಿಸುವುದು ಸರ್ಕಾರದ ತಂತ್ರಗಾರಿಕೆಯ ಭಾಗದಂತೆ ಕಾಣುತ್ತಿದೆ.
Advertisement
-ಎಂ.ಎನ್.ಗುರುಮೂರ್ತಿ