Advertisement

Karnataka: ಹೊಂದಾಣಿಕೆ ರಾಜಕಾರಣದ ಸತ್ಯಶೋಧನೆಗೆ BJP ಸಿದ್ಧ

12:59 AM Jun 23, 2023 | Team Udayavani |

ಬೆಂಗಳೂರು: “ಹೊಂದಾಣಿಕೆ ರಾಜಕಾರಣ”ಕ್ಕೆ ಸಂಬಂಧಿಸಿ ಕೇಸರಿ ಪಾಳಯದಲ್ಲಿ ಪ್ರತಿದಿನವೂ ಸದ್ದು ಮಾಡುತ್ತಿರುವ ವದಂತಿ ಈಗ ರಾಜ್ಯ ಘಟಕದ ನಿದ್ದೆಗೆಡಿಸಿದೆ. ಅದರ ಬಗ್ಗೆ ಸತ್ಯಶೋಧನೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ನಿಜಕ್ಕೂ ಹೊಂದಾಣಿಕೆ ನಡೆದಿತ್ತೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಜಿಲ್ಲಾವಾರು ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.

Advertisement

ಚುನಾವಣೆಗೆ ಪೂರ್ವದಲ್ಲಿ ಹಾಗೂ ಚುನಾ ವಣೆ ಘೋಷಣೆಯಾದ ಬಳಿಕ ಅನ್ಯಪಕ್ಷಗಳ ಜತೆಗೆ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿ ಕೊಂಡಿದ್ದರೇ ಎಂಬ ಬಗ್ಗೆ ವರದಿ ತಯಾರಿಸಿ ರಾಜ್ಯ ಘಟಕಕ್ಕೆ ನೀಡುವಂತೆ ಎಲ್ಲ ಜಿಲ್ಲಾಧ್ಯಕ್ಷರುಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮೌಖೀಕ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರ ಆಧಾರದ ಮೇಲೆ ವರಿಷ್ಠರಿಗೆ ವರದಿ ನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಈಗ ರಾಜ್ಯ ನಾಯಕರು ಮುಂದಾಗಿದ್ದಾರೆ.

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸ್ವಪಕ್ಷದವರ ವಿರುದ್ಧವೇ ದೂರು ಕೇಳಿ ಬಂದಿರುವ ಹಿನ್ನೆಲೆ ಯಲ್ಲಿ ಬಿಜೆಪಿಯ ಶಿಸ್ತು ಸಮಿತಿ ಸಂಚಾಲಕ ಲಿಂಗರಾಜ್‌ ಪಾಟೀಲ್‌ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಈ ಮೂಲಕ ಲೋಕಸಭೆ ಚುನಾವಣೆ ಮೇಲೆ ಹೊಂದಾಣಿಕೆ ರಾಜಕಾರಣ ಪರಿಣಾಮ ಬೀರದಂತೆ ನೋಡಿಕೊಳ್ಳಲು ಬಿಜೆಪಿ ಎಚ್ಚರಿಕೆ ವಹಿಸಲಾರಂಭಿಸಿದೆ.

ಧ್ವನಿ ಎತ್ತಿದ್ದು ಯಾರು?
ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಮೈಸೂರು ಸಂಸದ ಪ್ರತಾಪ್‌ ಸಿಂಹ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು. ಇದೆಲ್ಲದಕ್ಕೂ ಮುನ್ನ ಶಾಸಕ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್‌ ಯತ್ನಾಳ್‌ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಚುನಾವಣ ಸೋಲಿನ ಬಗ್ಗೆ ವರದಿ ಒಪ್ಪಿಸಿದ್ದರು.

ಸಂಸದ ಅನಂತ್‌ ಮತ್ತೆ ಚುರುಕು
ಚುನಾವಣ ಸೋಲಿನ ಬಳಿಕ ಸಾಮಾಜಿಕ ಜಾಲತಾಣ ಹಾಗೂ ಪಕ್ಷದ ತಳಹಂತದಲ್ಲಿ ಕಾರ್ಯ ಕರ್ತರು ಸಂಸದ ಅನಂತಕುಮಾರ್‌ ಹೆಗಡೆಯವರು ಮತ್ತೆ ಸಕ್ರಿಯ ರಾಜಕಾರಣದ ಮುನ್ನೆಲೆಗೆ ಬರಬೇಕೆಂಬ ಅಭಿಯಾನ ಪ್ರಾರಂಭಿಸಿದ್ದರು. ಇದಕ್ಕೆ ಅನಂತ ಕುಮಾರ್‌ ಹೆಗಡೆಯವರು ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ಹಲವರು ಲಾಬಿಗೆ ಮುಂದಾಗಿದ್ದರು. ಆದರೆ ಈ ಎಲ್ಲ ಉತ್ಸಾಹಿಗಳ ಉಮೇದಿಗೆ ಅನಂತ
ಕುಮಾರ್‌ ಹೆಗಡೆ ಮತ್ತೆ ತಣ್ಣೀರೆರಚುವ ಲಕ್ಷಣಗಳು ಕಂಡು ಬರುತ್ತಿವೆ. ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದಿದ್ದ ಹೆಗಡೆ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೂ. 24ರಂದು ಕಾರವಾರದಲ್ಲಿ ಅಧಿಕಾರಿಗಳ ಜತೆಗೆ ಸಭೆ ನಿಗದಿ ಮಾಡಿದ್ದಾರೆ. ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Advertisement

ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next