Advertisement
ವಕ್ಫ್ ಭೂ ಕಬಳಿಕೆ ವಿರುದ್ಧ ಐದು ಜಿಲ್ಲೆಗಳಲ್ಲಿ ಬಿಜೆಪಿ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದ ಬಿಜೆಪಿ ಭಿನ್ನರ ತಂಡ ಹಮ್ಮಿಕೊಂಡಿರುವ ಹೋರಾಟ ಬೀದರ್ನಿಂದ ಆರಂಭಗೊಂಡಿದ್ದು, ತಂಡವು ವಕ್ಫ್ ಬೋರ್ಡ್ನಿಂದ ಅನ್ಯಾಯಕ್ಕೆ ಒಳಗಾದ ಗ್ರಾಮಗಳಿಗೆ ಭೇಟಿ, ಜನರಿಂದ ಅಹವಾಲು ಸ್ವೀಕರಿಸಿತು.
ಬಿಜೆಪಿ ಹಿರಿಯ ಶಾಸಕ ಹಾಗೂ ಭಿನ್ನರ ಬಣದ ನೇತೃತ್ವ ವಹಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಶಾಸಕ ಬಿ.ಪಿ. ಹರೀಶ್, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮುಖಂಡರಾದ ಎನ್.ಆರ್. ಸಂತೋಷ ಮತ್ತು ಈಶ್ವರಸಿಂಗ್ ಠಾಕೂರ್ ಸಾಥ್ ನೀಡಿದರು.
Related Articles
ತಾಲೂಕಿನ ಧರ್ಮಾಪುರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಯತ್ನಾಳ್ ತಂಡಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಎರಡೂ ಬಣಗಳ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಈ ಮೂಲಕ ಕೇಸರಿ ಪಡೆಯ ಆಂತರಿಕ ಕೆಸರೆರಚಾಟ ಮತ್ತೆ ಬೀದಿಗೆ ಬಂದಂತಾಗಿದೆ. ವಕ್ಫ್ ವಿರುದ್ಧ ಯತ್ನಾಳ್ ನೇತೃತ್ವದ ಬಿಜೆಪಿಯ ಭಿನ್ನರ ತಂಡ ಬೀದರ್ನಿಂದ ಬೆಳಗಾವಿಯವರೆಗೆ ಹೋರಾಟ ಆರಂಭಿಸಿದೆ. ಜಿಲ್ಲೆಯ ಧರ್ಮಾಪುರ ಗ್ರಾಮದಲ್ಲಿ ಸ್ಥಳೀಯ ಶಾಸಕ ಡಾಣ ಶೈಲೇಂದ್ರ ಬೆಲ್ದಾಳೆ ಮತ್ತು ಯತ್ನಾಳ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಇದು ಅಲ್ಲಿ ಸೇರಿದ್ದ ಗ್ರಾಮಸ್ಥರಲ್ಲಿ ಗೊಂದಲ ಉಂಟು ಮಾಡಿತು. ಈ ಹೋರಾಟದ ಬಗ್ಗೆ ಸ್ಥಳೀಯ ಶಾಸಕರು, ಕಾರ್ಯಕರ್ತರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಯತ್ನಾಳ್ ವಿರುದ್ಧ ಘೋಷಣೆ ಕೂಗಿದರು. ಅನಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Advertisement
ಸಂಘರ್ಷ ಏಕೆ?ವಕ್ಫ್ ವಿರುದ್ಧ ಪಕ್ಷದ ಅಧಿಕೃತ ಹೋರಾಟಕ್ಕೆ ಮುನ್ನವೇ ಯತ್ನಾಳ್ ತಂಡದಿಂದ ಅಭಿಯಾನ
ಬೀದರ್ನಿಂದ ಬೆಳಗಾವಿವರೆಗೆ ಬೃಹತ್ ಜನಜಾಗೃತಿ ಹೋರಾಟಕ್ಕೆ ಬೀದರ್ನಲ್ಲಿ ಚಾಲನೆ
ಪಾದಯಾತ್ರೆಗೆ ಬಿಜೆಪಿ ಶಾಸಕ, ಮಾಜಿ ಸಚಿವ, ಮಾಜಿ ಸಂಸದರ ಸಾಥ್
ಆದರೆ ಯತ್ನಾಳ್ ತಂಡಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರಿಂದಲೇ ವಿರೋಧ
ಶಾಸಕ ಡಾ| ಶೈಲೇಂದ್ರ ಬೆಲ್ದಾಳೆ ಮತ್ತು ಯತ್ನಾಳ್ ಬೆಂಬಲಿಗರ ಮಧ್ಯೆ ಗಲಾಟೆ
ವಕ್ಫ್ ವಿರುದ್ಧ ಡಿ.4ರಿಂದ 6ರವರೆಗೆ ಪಕ್ಷದ ಅಧಿಕೃತ ರಾಜ್ಯ ಪ್ರವಾಸಕ್ಕೆ ಸಿದ್ಧತೆ ಭಿನ್ನ ನಾಯಕರ ವಿರುದ್ಧ ಶಿಸ್ತುಕ್ರಮ: ರಾಜ್ಯಾಧ್ಯಕ್ಷ ವಿಜಯೇಂದ್ರ ಪಟ್ಟು ? ತಮ್ಮ ವಿರುದ್ಧ ನಿರಂತರ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ವರಿಷ್ಠರ ಮೇಲೆ ಬಲವಾದ ಒತ್ತಡ ಹೇರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜ ಯೇಂದ್ರ ಮುಂದಾಗಿದ್ದು, ಡಿಸೆಂಬರ್ನಲ್ಲಿ ಇದೇ ಉದ್ದೇಶಕ್ಕಾಗಿ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಪಸಮರದ ಬೆನ್ನಲ್ಲೇ ವಿಜ ಯೇಂದ್ರ ರಾಜೀನಾಮೆಗೆ ಯತ್ನಾಳ್ ಮಾಡಿರುವ ಆಗ್ರಹ, ವಕ್ಫ್ ಬಗ್ಗೆ ಯತ್ನಾಳ್ ಬಣ ನಡೆಸುತ್ತಿರುವ ಅಭಿ ಯಾನ ವಿಜಯೇಂದ್ರ ಬಣವನ್ನು ತೀವ್ರವಾಗಿ ಕೆರಳಿಸಿದೆ. ಜತೆಗೆ ವಿರೋಧಿ ಚಟುವಟಿಕೆಯನ್ನು ಹೆಚ್ಚಿಸುತ್ತಿರುವುದರಿಂದ ಅವರನ್ನು ಹಣಿಯುವುದಕ್ಕಾಗಿ ವಿಜಯೇಂದ್ರ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ. ಡಿಸೆಂಬರ್ನಲ್ಲಿ ಬಿಜೆಪಿಯ ಸಂಘಟನ ಪರ್ವ ಮುಕ್ತಾಯಗೊಳ್ಳುತ್ತದೆ. ಸಂಸತ್ ಹಾಗೂ ವಿಧಾನ ಮಂಡಲದ ಅಧಿವೇಶನವೂ ಸಮಾಪನಗೊಳ್ಳುತ್ತದೆ. ಹೀಗಾಗಿ ಡಿಸೆಂಬರ್ ಕೊನೆಯ ವಾರ ಅವರು ದಿಲ್ಲಿಗೆ ತೆರಳಲು ನಿರ್ಧರಿಸಿದ್ದು, ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಆಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೋರ್ ಕಮಿಟಿಯಲ್ಲಿ ಮಂಡನೆ ಯತ್ನಾಳ್ ಅವರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದರೂ ಬಿಜೆಪಿಯ ಶಾಸಕರು, ಸಂಸದರು ಈ ಬಗ್ಗೆ ಒಮ್ಮೆಯೂ ತುಟಿ ಬಿಚ್ಚಿಲ್ಲ. ವಿಜಯೇಂದ್ರ ಪರ ಯಾರೂ ಮಾತನಾಡಿಲ್ಲ. ಪಕ್ಷದ ಪದಾಧಿಕಾರಿಗಳು ಕೂಡ ಖಂಡಿಸಿಲ್ಲ. ಇದು ವಿಜಯೇಂದ್ರ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಇವರೆಲ್ಲರ ಮೌನ ಸಮ್ಮತಿ ಯತ್ನಾಳ್ ಪರ ಇದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಘಟಕದಿಂದ ವರಿಷ್ಠರಿಗೆ ಪ್ರಸ್ತಾವ ಕಳುಹಿಸುವ ತಂತ್ರ ಹೆಣೆದಿದ್ದಾರೆ. ಈ ವಿಚಾರವನ್ನು ಕೋರ್ ಕಮಿಟಿಯಲ್ಲಿ ಮಂಡಿಸಿ, ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಬಣ ಮಾಡುವ ಟೀಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ, ಇದು ಪಕ್ಷ ವಿರೋಧಿ ಚಟುವಟಿಕೆ ಎಂಬ ನಿರ್ಣಯ ತೆಗೆದುಕೊಂಡು ವರಿಷ್ಠರಿಗೆ ರವಾನೆ ಮಾಡುವ ಲೆಕ್ಕಾಚಾರ ಹೊಂದಿದ್ದಾರೆ. ಡಿ. 7ರಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ: ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೂ ವಿಜಯೇಂದ್ರ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪದಾಧಿಕಾರಿಗಳೆಲ್ಲರೂ ವಿಜಯೇಂದ್ರ ನಿಷ್ಠರು ಎಂಬ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ನಿರ್ಣಯಕ್ಕೆ ಬರಲಾಗಿದೆ. ಈ ಪ್ರಕ್ರಿಯೆಯೂ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಮುಂದುವರಿಯುವ ವಿಶ್ವಾಸ ವಿಜಯೇಂದ್ರ ಅವರನ್ನು ಡಿಸೆಂಬರ್ ತಿಂಗಳಿನಲ್ಲಿ ವರಿಷ್ಠರು ಬದಲಾಯಿಸುತ್ತಾರೆಂಬ ನಿರೀಕ್ಷೆಯನ್ನು ವಿರೋಧಿ ಬಣ ಹೊಂದಿದೆ. ಆದರೆ ಇದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ನಡೆಸಿರುವ ವಿಜಯೇಂದ್ರ, ಮುಂದಿನ ಅವಧಿಗೂ ಮುಂದುವರಿಯುವ ವಿಶ್ವಾಸದಲ್ಲಿ ಇದ್ದಾರೆ. ಈ ಬಗ್ಗೆ ತಮ್ಮ ಆಪ್ತರ ಬಳಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವುದಿಲ್ಲ. ಡಿಸೆಂಬರ್ ಬಳಿಕ ಎಲ್ಲವೂ ತಮ್ಮ ನಿಯಂತ್ರಣಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಕ್ಫ್ : ಡಿ. 4ರಿಂದ ಬಿಜೆಪಿ ಅಧಿಕೃತ ರಾಜ್ಯ ಪ್ರವಾಸ
ಯತ್ನಾಳ್ ತಂಡದಿಂದ ವಕ್ಫ್ ವಿರುದ್ಧ ಅಭಿಯಾನ ಆರಂಭವಾದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕ ದಿಂದಲೂ ರಾಜ್ಯ ಪ್ರವಾಸ ಘೋಷಣೆ ಮಾಡಲಾಗಿದ್ದು, ಡಿ. 4ರಿಂದ 6ರ ವರೆಗೆ 3 ತಂಡಗಳಲ್ಲಿ ಪ್ರವಾಸ ನಡೆಯಲಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಈ ವಿಷಯ ತಿಳಿಸಿದ್ದು, ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಈ ಪ್ರವಾಸ ನಡೆಯಲಿದೆ ಎಂದರು.