Advertisement

ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ದ್ರೋಹ: ಸಿದ್ದರಾಮಯ್ಯ

08:56 PM Apr 02, 2023 | Team Udayavani |

ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮೋದಿ ಸರಕಾರ  ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಬೊಮ್ಮಾಯಿ ನೇತೃತ್ವದ ರಾಜ್ಯ ಮತ್ತು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರಗಳು ಕಳೆದ 6 ತಿಂಗಳಲ್ಲಿ ನೂರಾರು ಕೋಟಿ ರೂ. ಜಾಹೀರಾತು ಬಿಡುಗಡೆ ಮಾಡಿವೆ.

Advertisement

ಡಬಲ್‌ ಎಂಜಿನ್‌ ಸರ್ಕಾರ ಬಂದರೆ ಕರ್ನಾಟಕ ಸ್ವರ್ಗ ಆಗುತ್ತದೆ ಎಂದು ನಂಬಿಸಲು ಭಾಷಣಗಳು ಮತ್ತು ಜಾಹೀರಾತುಗಳ ಆಶ್ರಯ ಪಡೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಎರಡೂ ಸರ್ಕಾರಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಖರ್ಚು ಮಾಡುತ್ತೇವೆಂದು ಹೇಳಿದ್ದ ಮೊತ್ತ 47,557 ಕೋಟಿ ರೂ. ಇದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9,041 ಕೋಟಿ ರೂ. ಈ ಪೈಕಿ ಮಾರ್ಚ್‌ 31ರ ಅಂತ್ಯಕ್ಕೆ ಖರ್ಚು ಮಾಡಿದ್ದ ಮೊತ್ತ 23,735 ಕೋಟಿ ರೂ ಮಾತ್ರ. ಹಾಗಾಗಿ ಡಬಲ್‌ ಎಂಜಿನ್‌ ಸರ್ಕಾರಗಳ ಸಾಧನೆ ಶೇ.49.9ರಷ್ಟು ಮಾತ್ರ ಎಂದು ಟೀಕಿಸಿದ್ದಾರೆ.

ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ 19.25 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಬಿಡುಗಡೆ ಮಾಡಿದ್ದು 9.38 ಕೋಟಿ ರೂ. ಮಾತ್ರ. ವರ್ಷದ ಕೊನೆಗೆ ಶೇ.13 ರಷ್ಟು ಪ್ರಗತಿಯಾಗಿದೆ ಎಂದು ಹೇಳಿದ್ದಾರೆ.

ಕೊಟ್ಟಿದ್ದು ಕಡಿಮೆ
ಕಳೆದ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ 21,435 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾರ್ಚ್‌ 31 ಕ್ಕೆ ಬಿಡುಗಡೆ ಮಾಡಿದ ಒಟ್ಟಾರೆ ಮೊತ್ತ 13,339 ಕೋಟಿ.ರೂ ಮಾತ್ರ. ಈ ಅವಮಾನ ಮತ್ತು ದ್ರೋಹವನ್ನು ಕರ್ನಾಟಕದ ಜನ ಯಾಕೆ ಸಹಿಸಬೇಕು ಎಂದು ನರೇಂದ್ರಮೋದಿ ಅವರೇ ಎಂದು ಪ್ರಶ್ನಿಸಿದ್ದಾರೆ.
4.75 ಲಕ್ಷ ಕೋಟಿ ರೂಗಳಿಗೂ ಹೆಚ್ಚು ತೆರಿಗೆ ಮತ್ತು ಸುಂಕಗಳನ್ನು ನಮ್ಮ ರಾಜ್ಯದ ಜನರಿಂದ ಲೂಟಿ ಹೊಡೆಯುವ ನೀವು ನಮಗೆ ವಾಪಸ್ಸು ಕೊಡುತ್ತಿರುವುದು ಬರೀ ಭಾಷಣ ಮತ್ತು ಸುಳ್ಳು ಜಾಹಿರಾತುಗಳು ಮಾತ್ರ ಎಂದು ಕಿಡಿ ಕಾರಿದ್ದಾರೆ.

Advertisement

ಮನಮೋಹನಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.75 ರಷ್ಟು ಅನುದಾನ ಕೊಡುತ್ತಿತ್ತು. ರಾಜ್ಯ ಸರ್ಕಾರ ಶೇ.25 ರಷ್ಟು ಹೊಂದಾಣಿಕೆ ಮೊತ್ತ ಭರಿಸುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ಕೊಡುತ್ತಿದೆ ಕೇಂದ್ರ ಸರ್ಕಾರ ಶೇ.45 ರಷ್ಟು ಕೊಟ್ಟು ಮೋಸ ಮಾಡುತ್ತಿದೆ. ದುಡ್ಡು ರಾಜ್ಯದ ಜನರದ್ದು ಹೆಸರು ಮಾತ್ರ ಮೋದಿ ಸರ್ಕಾರದ್ದು. ಇದಕ್ಕಿಂತ ಬೇರೆ ಮೋಸ ಯಾವುದಾದರೂ ಇದೆಯೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ 2022-23 ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕಲ್ಯಾಣಕ್ಕೆ 597 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಮಾರ್ಚ್‌ 2023 ರ ಅಂತ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ ರೂ.121 ಕೋಟಿ ಮಾತ್ರ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿ ವೇತನಕ್ಕಾಗಿ 121 ಕೋಟಿ ರೂ. ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ಕೇವಲ 49 ಕೋಟಿ ಮಾತ್ರ. ಪರಿಶಿಷ್ಟ ಪಂಗಡದ ಪ್ರೀ-ಮೆಟ್ರಿಕ್‌ ವಿದ್ಯಾರ್ಥಿಗಳಿಗೆ 16 ಕೋಟಿ ರೂ. ಬಿಡುಗಡೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಒಂದು ರೂಪಾಯಿ ಸಹ ಬಿಡುಗಡೆ ಮಾಡಲಿಲ್ಲ. ಡಬಲ್‌ ಇಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುವ ಬೊಮ್ಮಾಯಿ ಮತ್ತು ಮೋದಿ ಸರ್ಕಾರ ಜನರಿಗೆ ದ್ರೋಹ ಮಾಡಿವೆ ಎಂದು ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next