Advertisement

ಛತ್ತೀಸ್‌ಗಢಕ್ಕೆ ಬಿಸಿ ಮುಟ್ಟಿಸಿದ ವೈಶಾಖ್‌; 7 ವಿಕೆಟ್‌ಗಳಿಂದ ಗೆದ್ದ ಕರ್ನಾಟಕ

11:42 PM Jan 06, 2023 | Team Udayavani |

ಬೆಂಗಳೂರು: ಮಧ್ಯಮ ವೇಗಿ ವಿಜಯ್‌ಕುಮಾರ್‌ ವೈಶಾಖ್‌ ಅವರ ಘಾತಕ ಬೌಲಿಂಗ್‌ ದಾಳಿಯಿಂದಾಗಿ ಛತ್ತೀಸ್‌ಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯವನ್ನು ಕರ್ನಾಟಕ 7 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿದೆ. ಇದರೊಂದಿಗೆ “ಸಿ’ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

Advertisement

55 ರನ್ನುಗಳ ಹಿನ್ನಡೆಗೆ ಸಿಲುಕಿದ ಛತ್ತೀಸ್‌ಗಢ, 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 35 ರನ್‌ ಮಾಡಿತ್ತು. ಕೊನೆಯ ದಿನದ ಆಟ ಮುಂದುವರಿಸಿ 177ಕ್ಕೆ ಕುಸಿಯಿತು. ವಿಜಯ್‌ಕುಮಾರ್‌ ವೈಶಾಖ್‌ 59 ರನ್ನಿತ್ತು 5 ವಿಕೆಟ್‌ ಉಡಾಯಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೈಶಾಖ್‌ ಅವರ ಮೊದಲ 5 ಪ್ಲಸ್‌ ವಿಕೆಟ್‌ ಸಾಧನೆಯಾಗಿದೆ.

123 ರನ್ನುಗಳ ಗೆಲುವಿನ ಗುರಿ ಪಡೆದ ಕರ್ನಾಟಕ 3 ವಿಕೆಟ್‌ ಕಳೆದುಕೊಂಡು 128 ರನ್‌ ಬಾರಿಸಿತು. ಇದು 4 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಗೆಲುವು. ಉಳಿದೆರಡು ಪಂದ್ಯಗಳು ಡ್ರಾಗೊಂಡಿವೆ. ಒಟ್ಟು 19 ಅಂಕ ಹೊಂದಿದೆ. ಇಷ್ಟೇ ಪಂದ್ಯಗಳಿಂದ 14 ಅಂಕ ಗಳಿಸಿರುವ ರಾಜಸ್ಥಾನ ದ್ವಿತೀಯ ಸ್ಥಾನಿಯಾಗಿದೆ. ಕರ್ನಾಟಕ-ರಾಜಸ್ಥಾನ ಮುಂದಿನ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಅಶುತೋಷ್‌ ಸಿಂಗ್‌ (18) ಅವರನ್ನು ಮೊದಲು ಪೆವಿಲಿಯನ್‌ಗೆ ರವಾನಿಸುವ ಮೂಲಕ ವೈಶಾಖ್‌ ಛತ್ತೀಸ್‌ಗಢದ ಮೇಲೆರ ಗಿದರು. ನಾಯಕ ಹರ್‌ಪ್ರೀತ್‌ ಸಿಂಗ್‌ (8) ಕೆ. ಗೌತಮ್‌ಗೆ ವಿಕೆಟ್‌ ಒಪ್ಪಿಸಿದರು. ಕರ್ನಾಟಕದ ಬೌಲಿಂಗ್‌ ದಾಳಿಯನ್ನು ತಡೆದು ನಿಂತವರು ಅಮನ್‌ದೀಪ್‌ ಖಾರೆ (50) ಮತ್ತು ವಿಕೆಟ್‌ ಕೀಪರ್‌ ಮಾಯಾಂಕ್‌ ವರ್ಮ (46) ಮಾತ್ರ.

ಚೇಸಿಂಗ್‌ ವೇಳೆ ಕರ್ನಾಟಕ ಆರ್‌. ಸಮರ್ಥ್ (24), ನಾಯಕ ಮಾಯಾಂಕ್‌ ಅಗರ್ವಾಲ್‌ (14) ಮತ್ತು ಮನೀಷ್‌ ಪಾಂಡೆ (27) ಅವರ ವಿಕೆಟ್‌ ಕಳೆದುಕೊಂಡಿತು. ನಿಕಿನ್‌ ಜೋಸ್‌ 44 ಮತ್ತು ಕೆ. ಗೌತಮ್‌ 2 ರನ್‌ ಮಾಡಿ ಅಜೇಯರಾಗಿ ಉಳಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಛತ್ತೀಸ್‌ಗಢ-311 ಮತ್ತು 177 (ಅಮನ್‌ದೀಪ್‌ ಖಾರೆ 50, ಮಾಯಾಂಕ್‌ ವರ್ಮ 46, ವಿ. ವೈಶಾಖ್‌ 59ಕ್ಕೆ 5, ಕೆ. ಗೌತಮ್‌ 41ಕ್ಕೆ 2). ಕರ್ನಾಟಕ-366 ಮತ್ತು 3 ವಿಕೆಟಿಗೆ 128 (ಜೋಸ್‌ ಔಟಾಗದೆ 44, ಸಮರ್ಥ್ 24, ಪಾಂಡೆ 27, ಅಗರ್ವಾಲ್‌ 14, ಸುಮಿತ್‌ ರುಯಿಕರ್‌ 35ಕ್ಕೆ 2).

ಡ್ರಾ ಸಾಧಿಸಿದ ತಮಿಳುನಾಡು
ಮುಂಬಯಿ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ ತಮಿಳುನಾಡು, ಆತಿಥೇಯ ಮುಂಬಯಿ ಎದುರಿನ ರಣಜಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡು 337 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿತ್ತು. ಆದರೆ ದ್ವಿತೀಯ ಸರದಿಯಲ್ಲಿ ಮೂವರ ಶತಕ ಸಾಹಸದಿಂದ 548 ರನ್‌ ಪೇರಿಸಿತು. ಗೆಲುವಿಗೆ 212 ರನ್‌ ಗುರಿ ಪಡೆದ ಮುಂಬಯಿ, ಪಂದ್ಯ ಕೊನೆಗೊಳ್ಳುವಾಗ 3 ವಿಕೆಟಿಗೆ 137 ರನ್‌ ಮಾಡಿತ್ತು.

ತಮಿಳುನಾಡು ಪರ ಮಧ್ಯಮ ಕ್ರಮಾಂಕದ ಆಟಗಾರರಾದ ಪ್ರದೋಶ್‌ ಪೌಲ್‌ 169, ನಾಯಕ ಬಾಬಾ ಇಂದ್ರಜಿತ್‌ 103 ಮತ್ತು ವಿಜಯ್‌ ಶಂಕರ್‌ 103 ರನ್‌ ಬಾರಿಸಿದರು. ತಂಡವನ್ನು ಸೋಲಿನ ಸುಳಿಯಿಂದ ಮೇಲೆತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next