Advertisement

ಬಯಲಾಟ ಅಕಾಡೆಮಿ ಗೌರವ- ವಾರ್ಷಿಕ ಪ್ರಶಸ್ತಿ ಪ್ರಕಟ

10:52 PM Sep 16, 2022 | Team Udayavani |

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ರಾಜ್ಯದ 23 ಜಿಲ್ಲೆಗಳ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಅಜೀತ ಬಸಾಪುರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ 5 ಗೌರವ ಪ್ರಶಸ್ತಿ ಹಾಗೂ 10 ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದ್ದು, ಎರಡು ವರ್ಷದ ಒಟ್ಟು 10 ಗೌರವ ಹಾಗೂ 20 ವಾರ್ಷಿಕ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಗೆ 50 ಸಾವಿರ ರೂ. ಹಾಗೂ ವಾರ್ಷಿಕ ಪ್ರಶಸ್ತಿಗೆ 25 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಈ ಬಾರಿ ಕಲಾವಿದರನ್ನು ನೇರವಾಗಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

2021ನೇ ಸಾಲಿಗೆ ಗೌರವ ಪ್ರಶಸ್ತಿಗೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಅನಸೂಯಾ ವಡ್ಡರ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ಸಂಕೋನಟ್ಟಿ ಗ್ರಾಮದ ನರಸಪ್ಪಾ ಶಿರಗುಪ್ಪಿ (ಬಯಲಾಟ), ಕೊಪ್ಪಳ ಜಿಲ್ಲೆಯ ಮುಂಡರಗಿಯ ವೀರಪ್ಪ ಬಿಸರಳ್ಳಿ (ದೊಡ್ಡಾಟ), ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಗ್ರಾಮದ ಎಸ್‌.ಎ. ಕೃಷ್ಣಯ್ಯ (ತೊಗಲು ಗೊಂಬೆಯಾಟ), ಹಾವೇರಿ ಜಿಲ್ಲೆಯ ಕಬನೂರ ಗ್ರಾಮದ ಗೋವಿಂದಪ್ಪ ತಳವಾರ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

ವಾರ್ಷಿಕ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಸುಂದ್ರವ್ವ ಮೇತ್ರಿ (ಶ್ರೀಕೃಷ್ಣ ಪಾರಿಜಾತ), ಹಾವೇರಿ ಜಿಲ್ಲೆಯ ಕಲಕೇರಿಯ ಫಕ್ಕೀರಪ್ಪ ಗೌರಕ್ಕನವರ (ಬಯಲಾಟ), ವಿಜಯಪುರದ ರಬಿನಾಳ ಗ್ರಾಮದ ಚಂದ್ರಶೇಖರ ಮೇಲಿನಮನಿ (ಶ್ರೀಕೃಷ್ಣ ಪಾರಿಜಾತ), ಕಲಬುರ್ಗಿಯ ಕೊಲ್ಲೂರಿನ ದುಂಡಪ್ಪ ಗುಡ್ಲಾ (ಬಯಲಾಟ), ಧಾರವಾಡದ ಹಿರೇಹರಕುಣಿಯ ಚಂದ್ರಶೇಖರಯ್ಯ ಗುರಯ್ಯನವರ (ದೊಡ್ಡಾಟ), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಸುಶೀಲಾ ಮಾದರ (ಸಣ್ಣಾಟ), ರಾಯಚೂರು ಜಿಲ್ಲೆ ಸಿಂಧನೂರಿನ ವೆಂಕೋಬ ಗೋನಾವರ (ದೊಡ್ಡಾಟ), ದಾವಣಗೆರೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯ ಎಸ್‌.ಚಂದ್ರಪ್ಪ (ದೊಡ್ಡಾಟ), ಬೆಂಗಳೂರಿನ ಬನಶಂಕರಿಯ ಎಂ.ಆರ್‌.ವಿಜಯ (ಸೂತ್ರದ ಗೊಂಬೆಯಾಟ), ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿಯ ದಾನಪ್ಪ ಹಡಪದ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

2022ನೇ ಸಾಲಿಗೆ ಗೌರವ ಪ್ರಶಸ್ತಿಗೆ ಬಳ್ಳಾರಿಯ ಸಂಡೂರ ತಾಲೂಕಿನ ಲಕ್ಷ್ಮೀಪುರದ ಕೆ.ಮೌನಾಚಾರಿ (ಬಯಲಾಟ), ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ ಸುರೇಂದ್ರ ಹುಲ್ಲಂಬಿ (ಸಣ್ಣಾಟ), ತುಮಕೂರಿನ ತೊಣಚಗೊಂಡನಹಳ್ಳಿಯ ಮಲ್ಲೇಶಯ್ಯ ಶತಕಂಠ (ದೊಡ್ಡಾಟ), ಮಂಡ್ಯ ಜಿಲ್ಲೆ ನಾಗಮಂಡಲದ ಚಂದ್ರಮ್ಮ (ತೊಗಲು ಗೊಂಬೆಯಾಟ) ಹಾಗೂ ಗದಗ ಜಿಲ್ಲೆ ಬೆಟಗೇರಿಯ ಅಶೋಕ ಸುತಾರ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

Advertisement

ವಾರ್ಷಿಕ ಪ್ರಶಸ್ತಿಗೆ ಬಾಗಲಕೋಟೆ ರಬಕವಿ-ಬನಹಟ್ಟಿಯ ಮಲ್ಲಪ್ಪ ಗಣಿ (ಸಣ್ಣಾಟ), ಹಾವೇರಿ ಶಿಗ್ಗಾವಿ ತಾಲೂಕಿನ ಹುಲಸೋಗಿಯ ಫಕೀರಪ್ಪ ಬಿಸೆಟ್ಟಿ (ದೊಡ್ಡಾಟ), ವಿಜಯನಗರ ಕೂಡ್ಲಿಗಿ ತಾಲೂಕಿನ ವಿರುಪಾಪುರದ ನಾಗರತ್ಮಮ್ಮ (ಬಯಲಾಟ), ಬೆಳಗಾವಿಯ ಮಂಟೂರಿನ ಕೆಂಪಣ್ಣಾ ಚೌಗಲಾ (ಶ್ರೀಕೃಷ್ಣ ಪಾರಿಜಾತ), ಯಾದಗಿರಿ ಸುರಪುರ ತಾಲೂಕಿನ ಕರಡಕಲ್ಲು ಗ್ರಾಮದ ರಾಮಚಂದ್ರಪ್ಪ ಕಟ್ಟಿಮನಿ (ದೊಡ್ಡಾಟ), ಬಳ್ಳಾರಿಯ ಅಂಬುಜಮ್ಮ ಸುಂಕಣ್ಣವ(ಬಯಲಾಟ), ಚಿತ್ರದುರ್ಗ ಚೆಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯ ಕೆ.ಪಿ.ಭೂತಯ್ಯ (ದೊಡ್ಡಾಟ), ದಾವಣಗೆರೆ ಚನ್ನಗಿರಿ ತಾಲೂಕಿನ ಕಣಿವೆಯ ಜಿ.ರಾಮಪ್ರಭು (ಬಯಲಾಟ), ಶಿವಮೊಗ್ಗ ಜಿಲ್ಲೆಯ ಬಿ.ರತ್ಮಮ್ಮ ಸೋಗಿ (ದೊಡ್ಡಾಟ), ಧಾರವಾಡದ ಕಂಪ್ಲಿಕೊಪ್ಪ ಗ್ರಾಮದ ಫ‌ಕ್ಕೀರಪ್ಪ ನೆರ್ತಿ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ಬಯಲಾಟ ಸಂಭ್ರಮ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಮೂಲಕ ವಿವಿಧ ಕಲೆಗಳನ್ನು ಪ್ರದರ್ಶಿಸುವ ಮೂಲಕ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಸಾಕ್ಷಚಿತ್ರಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನ ಬೆಳೆದಷ್ಟು ಬಯಲಾಟಗಳು ಬೆಳೆದಿಲ್ಲ. ಪ್ರತಿಯೊಂದು ಮನೆಯನ್ನು ಒಬ್ಬ ಕಲಾವಿದರನ್ನು ಹುಟ್ಟು ಹಾಕಿದರೆ ಮಾತ್ರ ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ರಾಜ್ಯ ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next